

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ, ಅದರ ಪ್ರಧಾನಮಂತ್ರಿ ಶೆಹ್ಬಾಝ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರನ್ನು ಪ್ರಶಂಸಿಸಿ ಸುದ್ದಿಯಾಗಿದ್ದಾರೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವೆ ದಾಳಿಗಳ ಬಳಿಕ ಉದ್ವಿಗ್ನತೆ ಹೆಚ್ಚಳದ ನಡುಆವೆ ಈ ಹೇಳಿಕೆ ನೀಡಿದ್ದಾರೆ.
ನಾನು ಪಾಕಿಸ್ತಾನದೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದೇನೆ. ಅವರಿಗೆ ಒಬ್ಬ ಅತ್ಯುತ್ತಮ ಪ್ರಧಾನಮಂತ್ರಿ, ಒಬ್ಬ ಉತ್ತಮ ಜನರಲ್ ಇದ್ದಾರೆ — ನಾನು ಬಹಳ ಗೌರವಿಸುವ ಇಬ್ಬರು ವ್ಯಕ್ತಿಗಳು. ಪಾಕಿಸ್ತಾನ ಅತ್ಯುತ್ತಮವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದು, ಪಾಕಿಸ್ತಾನ-ಆಫ್ಘಾನಿಸ್ತಾನ ಸಂಘರ್ಷವನ್ನು ನಿಲ್ಲಿಸಲು ಮಧ್ಯಪ್ರವೇಶ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಟ್ರಂಪ್ ಪತ್ರಕರ್ತರಿಗೆ ಹೇಳಿದರು.
ಪಾಕಿಸ್ತಾನ ತಾಲಿಬಾನ್ ನಿಯಂತ್ರಣದಲ್ಲಿರುವ ಕಾಬುಲ್, ಕಂದಹಾರ್ ಮತ್ತು ಪಕ್ತಿಯಾ ನಗರಗಳನ್ನು ಗುರಿಯಾಗಿಸಿ ವಾಯು ದಾಳಿಗಳನ್ನು ನಡೆಸಿದ ನಂತರ ಈ ಹೇಳಿಕೆಗಳು ಬಂದಿವೆ. ಗಡಿಯಾಚೆ ಆಶ್ರಯ ಪಡೆದಿದ್ದರೆಂದು ಆರೋಪಿಸಲಾದ ಉಗ್ರರ ವಿರುದ್ಧ “ಮುಕ್ತ ಯುದ್ಧ” ಎಂದು ಪಾಕಿಸ್ತಾನ ಪರಿಸ್ಥಿತಿಯನ್ನು ವಿವರಿಸಿದೆ.
ಇದಕ್ಕೂ ಮುನ್ನ ಅಫ್ಘಾನ್ ಪಡೆಗಳು ಪಾಕಿಸ್ತಾನಕ್ಕೆ ಒಳನುಗ್ಗಿ ದಾಳಿ ನಡೆಸಿದ್ದವು ಎಂದು ಹೇಳಲಾಗಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಮ ಕೈಗೊಂಡಿದೆ. ಎರಡೂ ಪಾಳಯಗಳು ಸಾವುನೋವುಗಳ ವರದಿ ನೀಡಿದರೂ, ಆ ಅಂಕಿಅಂಶಗಳನ್ನು ದೃಢಪಡಿಸಿಲ್ಲ.
ಪಾಕಿಸ್ತಾನದ ಪ್ರಕಾರ 12 ಸೈನಿಕರು ಮೃತಪಟ್ಟಿದ್ದಾರೆ. ಅಫ್ಘಾನ್ ಅಧಿಕಾರಿಗಳು 13 ತಾಲಿಬಾನ್ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ. ಎರಡೂ ಪಾಳಯಗಳು ಎದುರಾಳಿಗಳ ಹೆಚ್ಚಿನ ನಷ್ಟವನ್ನು ಹೇಳಿಕೊಂಡಿವೆ.
ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಪಾಕಿಸ್ತಾನದ ಸೇನಾ ವಕ್ತಾರ ಲೆ. ಜನರಲ್ ಅಹ್ಮದ್ ಶರೀಫ್ ಚೌಧರಿ, ಪಾಕಿಸ್ತಾನದ ವಾಯು ಹಾಗೂ ಭೂ ಕಾರ್ಯಾಚರಣೆಗಳಲ್ಲಿ ಕನಿಷ್ಠ 274 ಅಫ್ಘಾನ್ ಪಡೆಗಳ ಸದಸ್ಯರು ಮತ್ತು ಸಂಬಂಧಿತ ಉಗ್ರರು ಮೃತಪಟ್ಟಿದ್ದು, 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ 12 ಸೈನಿಕರು ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಒಬ್ಬ ಸೈನಿಕ ನಾಪತ್ತೆಯಾಗಿದ್ದಾರೆ.
ಅಫ್ಘಾನ್ ಸರ್ಕಾರ ಪಾಕಿಸ್ತಾನ ದಕ್ಷಿಣ-ಪೂರ್ವ ಅಫ್ಗಾನಿಸ್ತಾನದ ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ದಾಳಿ ನಡೆಸಿದಾಗ 19 ನಾಗರಿಕರು ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿತು.
ಉದ್ವಿಗ್ನತೆ ಹೆಚ್ಚಾದರೂ, ತಾಲಿಬಾನ್ ಆಡಳಿತ ಮಾತುಕತೆಗಳಿಗೆ ಸಿದ್ಧತೆಯ ಸೂಚನೆ ನೀಡಿದೆ. ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ವಿವಾದಗಳನ್ನು ಪರಿಹರಿಸಲು ಸಂವಾದವೇ ಉತ್ತಮ ಮಾರ್ಗ ಎಂದು ಹೇಳಿದರು.
ಅಮೆರಿಕದ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ರಾಜಕೀಯ ವ್ಯವಹಾರಗಳ ಉಪ ವಿದೇಶಾಂಗ ಕಾರ್ಯದರ್ಶಿ ಅಲಿಸನ್ ಹುಕರ್ ಇತ್ತೀಚಿನ ಘರ್ಷಣೆಯಲ್ಲಿ ಜೀವಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸಂತಾಪ ಸೂಚಿಸಿದರು. ತಾಲಿಬಾನ್ ದಾಳಿಗಳ ವಿರುದ್ಧ ಪಾಕಿಸ್ತಾನ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿಗೆ ಅಮೆರಿಕ ಬೆಂಬಲವನ್ನು ಪುನರುಚ್ಚರಿಸಿದರು.
Advertisement