ರಾಜ್ಯ

ಕೋಮು ಪ್ರಚೋದನಕಾರಿ ಭಾಷಣ: ಬಿಜೆಪಿ ಶಾಸಕರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

Nagaraja AB

ಮಂಗಳೂರು: ಶಾಲೆಯೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ವೈ ಭರತ್ ಶೆಟ್ಟಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ವಿಧಾನಸಭಾ ಸ್ಪೀಕರ್‌ಗೆ ಕಾಂಗ್ರೆಸ್ ಮನವಿ ಸಲ್ಲಿಸಲಿದೆ ಎಂದು ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಬುಧವಾರ ಹೇಳಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಡಿಸೋಜಾ, ಇತ್ತೀಚೆಗೆ ನಗರದ ಸೇಂಟ್ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಆ ಶಾಲೆಯಲ್ಲಿ ತರಗತಿಯೊಳಗೆ "ಹಿಂದೂ ವಿರೋಧಿ" ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾದ ಶಿಕ್ಷಕಿಯನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ಖಾಸಗಿ ಶಾಲೆಯಲ್ಲಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಬದಲು ಶಾಸಕರು ಕೋಮು ಭಾವನೆಗಳನ್ನು ಕೆರಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷರ ಮುಂದೆ ಬೇಡಿಕೆ ಇಡಲಾಗುವುದು ಎಂದು ಡಿಸೋಜಾ ಹೇಳಿದರು.

ಸುಮಾರು ಆರು ದಶಕಗಳ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಯೊಂದಕ್ಕೆ ಕಳಂಕ ತರುವ ಪ್ರಯತ್ನ ಹಾಗೂ ಕೋಮುವಾದಿ ಹೇಳಿಕೆಗಳಿಗಾಗಿ ಶಾಸಕರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಜೆ ಆರ್ ಲೋಬೋ, ಎ ಸಿ ವಿನಯರಾಜ್ ಉಪಸ್ಥಿತರಿದ್ದರು.

SCROLL FOR NEXT