ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 
ರಾಜ್ಯ

ಮಾರುವೇಷದಲ್ಲಿ ಒಮ್ಮೆ ಬಿಡಿಎಗೆ ಹೋಗಿಬನ್ನಿ: ಸುಗ್ರೀವಾಜ್ಞೆ ಮೂಲಕ ಪ್ರಾಧಿಕಾರ ಮುಚ್ಚುವುದೇ ಲೇಸು; ಹೈಕೋರ್ಟ್

Shilpa D

ಬೆಂಗಳೂರು: ನಿವೇಶನ ಹಂಚಿಕೆದಾರರು ಮತ್ತು ಬಿಡಿಎ ರೂಪಿಸಿದ ಬಡಾವಣೆಗಳಿಂದ ಭೂಮಿ ಕಳೆದುಕೊಂಡವರ ಸಂಕಷ್ಟವನ್ನು ಪರಿಗಣಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಸುಗ್ರೀವಾಜ್ಞೆ ಮೂಲಕ ಮುಚ್ಚುವುದೇ ಲೇಸು ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಸರ್ ಎಂವಿ ಲೇಔಟ್‌ಗೆ ಪರಿಹಾರ ನೀಡದೆ ಬಿಡಿಎ 18 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿದೆ ಎಂದು ಮುದ್ದೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ರೀತಿ ಅಭಿಪ್ರಾಯ ಪಟ್ಟಿದೆ.

ನ್ಯಾಯಾಲಯದ ಮೆಟ್ಟಿಲೇರಿದ್ದ ಬಿಡಿಎ ಆಯುಕ್ತ ಎನ್ .ಜಯರಾಂ ಅವರಿಗೆ ಜಮೀನು ಕಳೆದುಕೊಂಡವರ ಸಂಕಷ್ಟವನ್ನು ವಿವರಿಸಿದ ಮುಖ್ಯ ನ್ಯಾಯಮೂರ್ತಿ, 2003ರಲ್ಲಿ ಯಾವುದೇ ಸ್ವಾಧೀನ ಅಧಿಸೂಚನೆ ಹೊರಡಿಸದೆ ಭೂಮಿಯನ್ನು ಕಬಳಿಸಲಾಗಿದೆ. 2003ರಲ್ಲಿ ತಾನು 18 ಗುಂಟೆಗಳನ್ನು ಕಳೆದುಕೊಂಡಿದ್ದೇನೆ ಎಂದು ಭೂಮಾಲೀಕರು ಹೇಳಿದರೆ, ಬಿಡಿಎ ಕೇವಲ 15 ಗುಂಟೆ ತೆಗೆದುಕೊಂಡಿದೆ ಎಂದು ಹೇಳುತ್ತದೆ.

ಹಾಗಿದ್ದರೆ, ನೀವು ಅವರಿಗೆ ಪರಿಹಾರವನ್ನು ನೀಡಬಹುದಿತ್ತು. ಈಗ 21 ವರ್ಷಗಳ ನಂತರ 2024 ರಲ್ಲಿ, ಬಿಡಿಎ ನಿಖರವಾದ ಭೂಮಿಯನ್ನು ಕಂಡುಹಿಡಿಯಲು ಸಮೀಕ್ಷೆಯನ್ನು ನಡೆಸಲು ಬಯಸಿದೆ. ಹಾಗಿದ್ದಲ್ಲಿ, ಈ ದೇಶದಲ್ಲಿ ಒಬ್ಬ ನಾಗರಿಕ ಏನು ಮಾಡಬಹುದು? ನೀವು (ಕಮಿಷನರ್) ಭೂಮಾಲೀಕರಾಗಿದ್ದರೆ, ನೀವು ಏನು ಮಾಡುತ್ತೀರಿ ಎಂದು ಸಿಜೆ ಜಯರಾಮ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

21 ವರ್ಷ ಅಂದರೆ, ಸರಿ ಸುಮಾರು ಕಾಲು ಶತಮಾನದಷ್ಟು ಸಮಯವನ್ನು ಪರಿಹಾರಕ್ಕಾಗಿ ವ್ಯಕ್ತಿಯೊಬ್ಬರನ್ನು ಬಿಡಿಎ ಅಲೆಯುವಂತೆ ಮಾಡಲಾಗಿದೆ. ಆದರೂ, ಏಕೆ ಪರಿಹಾರ ನೀಡಿಲ್ಲ? ಎಂದು ಪ್ರಶ್ನಿಸಿತು. ಅಷ್ಟೇ ಅಲ್ಲದೆ, ಬಿಡಿಎ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಮಾರು ವೇಷದಲ್ಲಿ ಒಮ್ಮೆ ಹೋಗಿ ಪರಿಶೀಲಿಸಿ.‌ ಆಗ ಕಚೇರಿಯಲ್ಲಿ ಏನಾಗುತ್ತಿದೆ ಎಂಬುದು ತಿಳಿಯಲಿದೆ ಎಂದು ಬಿಡಿಎ ಆಯುಕ್ತರಿಗೆ ನ್ಯಾಯಪೀಠ ಸಲಹೆ ನೀಡಿತು.

ಬೆಳಗ್ಗೆ 11 ಗಂಟೆ ಅಥವಾ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಿಡಿಎ ಆಯುಕ್ತರ ಕಚೇರಿಗೆ ಹೋದರೆ ನಿಮ್ಮ ಕೆಲಸ ಮಾಡಿಕೊಡುವುದಾಗಿ ಹೇಳುವ ನೂರಾರು ಏಜೆಂಟ್​ಗಳು ಸಿಗುತ್ತಾರೆ. ಅಂತಹ ಜನರನ್ನು ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿಸಬೇಕು. ಜೊತೆಗೆ, ಬಿಡಿಎನಲ್ಲಿ ನಡೆಯುತ್ತಿರುವ ಅಕ್ರಮಗಳ ಸಂಬಂಧ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಲವು ದೂರು ಪತ್ರಗಳು ಬರುತ್ತಿವೆ. ಹೀಗಾಗಿ ಆಯುಕ್ತರಾಗಿರುವ ನೀವು ಇಚ್ಛೆಯಿಂದ ಒಳ್ಳೆಯ ಕೆಲಸ ಮಾಡಿ, ಜನ ನಿಮಗೆ ಒಳ್ಳೆಯದನ್ನು ಬಯಸುತ್ತಾರೆ ಎಂದು ಪೀಠ ಇದೇ ವೇಳೆ ತಿಳಿಸಿತು.

ನೀವು ಯಾವ ಹಿನ್ನೆಲೆಯಿಂದ ಬಂದಿದ್ದೀರಿ ಎಂಬುದು ನಮಗೆ ತಿಳಿದಿಲ್ಲ, ಆದರೆ ನಾವು ಕೃಷಿ ಹಿನ್ನೆಲೆಯಿಂದ ಬಂದವರು. ನೀವು ಪ್ರಾಯೋಗಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರಿ? ನಾಗರಿಕರು 21 ವರ್ಷಗಳಿಂದ ಕಾಯುತ್ತಿದ್ದರೂ ಅವರ ಜಮೀನಿಗೆ ಒಂದು ಪೈಸೆಯೂ ಸಿಗದೆ ನಮಗೆ ನೋವಾಗಿದೆ. ನಾವು ನಿಮ್ಮಲ್ಲಿ ತಪ್ಪು ಹುಡುಕುತ್ತಿಲ್ಲ, ಆದರೆ ವಿನಂತಿಸುವ ಧ್ವನಿಯಲ್ಲಿ ಆಜ್ಞಾಪಿಸುತ್ತಿದ್ದೇವೆ, ನಿಮ್ಮ ಅಧಿಕಾರಿಗಳನ್ನು ಕರೆದು ಅವರಿಂದ ಕೆಲಸ ಮಾಡಿಸಿ ಎಂದು ಹೈಕೋರ್ಟ್ ಹೇಳಿದೆ.

SCROLL FOR NEXT