ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಸದನದಲ್ಲಿ ಕಾವೇರಿದ ಹನುಮಧ್ವಜ ವಿವಾದ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

Manjula VN

ಬೆಂಗಳೂರು: ಮಂಡ್ಯ ಜಿಲ್ಲೆ ಕೆರಗೋಡುವಿನ ಹನುಮ ಧ್ವಜ, ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ, ಹಾನಗಲ್​ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ, ರಾಮಮಂದಿರ ವಿಚಾರ ವಿಧಾನಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

ನಿಯಮ 69ರಡಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡುವಾಗ ಕೆರಗೋಡುವಿನ ಹನುಮ ಧ್ವಜದ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರು. ಈ ವೇಳೆ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು, ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಹನುಮ ಧ್ವಜದ ವಿಚಾರವನ್ನು ಪ್ರಸ್ತಾಪಿಸಲು ಮುಂದಾಗುತ್ತಿದ್ದಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಧ್ವಜವನ್ನು ತೆಗೆದುಹಾಕಿ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು.

ಮಂಡ್ಯ ಶಾಸಕ ರವಿಕುಮಾರ್ ಮಾತನಾಡಿ, ನಿಮ್ಮ ಹೋರಾಟ ರಾಷ್ಟ್ರಧ್ವಜದ ವಿರುದ್ಧವೇ ಎಂದು ಪ್ರಶ್ನಿಸಿದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನಿಮಗೆ ರಾಷ್ಟ್ರಧ್ವಜ ಬೇಕೇ, ಹನುಮ ಧ್ವಜ ಬೇಕೇ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿಗೆ ಹಾಕಿ. ಸರ್ಕಾರ ನಿಮ್ಮದೇ ಅಲ್ಲವೇ ಎಂದು ಹೇಳಿದರು.

ನಂತರ ಮಾತನಾಡಿದ ಬಿಜೆಪಿ ಶಾಸಕ ಸುನಿಲ್‍ಕಮಾರ್, ರಾಷ್ಟ್ರಧ್ವಜದ ಬಗ್ಗೆ ನೀವು (ಕಾಂಗ್ರೆಸ್) ತೋರುತ್ತಿರುವ ಕಳಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾದಾಗ ಕಾಂಗ್ರೆಸ್‍ಗೆ ಈ ಕಳಕಳಿ ಇರಲಿಲ್ಲವೇ ಎಂದು ತಿರುಗೇಟು ನೀಡಿದರು. ಆಗ ಪರಸ್ಪರ ಆರೋಪ, ಪ್ರತ್ಯಾರೋಪ, ವಾಗ್ವಾದ ನಡೆದು ಸದನದಲ್ಲಿ ಗೊಂದಲ ಉಂಟಾಯಿತು. ಸಭಾಧ್ಯಕ್ಷರು ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರನ್ನು ಸಮಾಧಾನಪಡಿಸಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ಬಳಿಕ ಮಾತು ಮುಂದುವರೆಸಿದ ಅಶೋಕ್ ಅವರು, ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾಗೂ ರಾಜ್ಯೋತ್ಸವದಂದು ನಾಡಧ್ವಜವನ್ನು ಹಾರಿಸುತ್ತಾರೆ. 108 ಅಡಿ ಧ್ವಜ ಸ್ತಂಭವನ್ನು ಸುತ್ತಮುತ್ತಲು ಗ್ರಾಮದವರಿಂದ ಹಣ ಸಂಗ್ರಹಿಸಿ ನಿರ್ಮಿಸಿದ್ದಾರೆ. ಒಂದು ವೇಳೆ ಅಕ್ರಮವಾಗಿ ಧ್ವಜಸ್ತಂಭ ನಿಲ್ಲಿಸಿದ್ದರೆ ಏಕೆ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

SCROLL FOR NEXT