ರಂಭಾಪುರಿಶ್ರೀ ಪ್ರಕರಣ: ಮಹಿಳೆಯರು ಸೇರಿ ಒಟ್ಟು 59 ಜನರ ವಿರುದ್ಧ ಎಫ್ಐಆರ್
ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರು ಸೇರಿದಂತೆ ಒಟ್ಟು 59 ಜನರ ವಿರುದ್ಧ ಬಾಗಲಕೋಟೆ ತಾಲೂಕಿನ ಕಲಾದಗಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಂಭಾಪುರಿ ಶ್ರೀಗಳ ಭಕ್ತರ ಕಡೆಯಿಂದ ದೂರು ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವಿವಾದ ಕೋರ್ಟ್ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು, ಶಾಂತಿ ಕದಡುವ ಉದ್ದೇಶದ ಗಲಾಟೆ ಮತ್ತು ಶ್ರೀಗಳಿಗಾದ ಅವಮಾನ ಎಲ್ಲವನ್ನೂ ಪರಿಗಣಿಸಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ. ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.
ಬೆಂಗಳೂರು: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ, ಮೂವರು ಸಜೀವದಹನ
ಬೆಂಗಳೂರಿನ ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿನ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಬಂಧಿಸಿದ್ದು ಮೂವರು ದುರ್ಮರಣ ಹೊಂದಿದ್ದಾರೆ. ಇಂದು ಸಂಜೆ ಫ್ಯಾಕ್ಟರಿಯಲ್ಲಿ ಕೆಮಿಕಲ್ ಸ್ಫೋಟವಾಗಿ ನಂತರ ಬೆಂಕಿ ಕಾಣಿಸಿಕೊಂಡಿತ್ತು. ಇನ್ನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಫ್ಯಾಕ್ಟರಿಯಲ್ಲಿ ಹಲವು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಅವರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ
ಬ್ಯಾಗ್ನಲ್ಲಿದ್ದ ವಸ್ತು ಸ್ಫೋಟಗೊಂಡು ಹಲವರಿಗೆ ಗಾಯಗಳಾಗಿರುವಂತಹ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪಳದಲ್ಲಿ ನಡೆದಿದೆ. ಬೆಡ್ಶೀಟ್ ಮಾರಲು ಬಂದಿದ್ದ ಆಂಥೋಣಿ ಸೇರಿದಂತೆ ಇತರೆ ಬೆಡ್ಶೀಟ್ ವ್ಯಾಪಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಮೇಶ್ ಎಂಬಾತ ಆಂಥೋಣಿ ಬಳಿ ಬ್ಯಾಗ್ ಇಟ್ಟು ಹೋಗಿದ್ದ. ಈ ವೇಳೆ ಬ್ಯಾಗ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಬ್ಯಾಗ್ನಲ್ಲಿ ಹಂದಿ ಬೇಟೆಗೆಂದು ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಸ್ಫೋಟದಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಮೇಶ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಹತ್ವದ ಮಾಹಿತಿ
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಹತ್ವದ ಮಾಹಿತಿ ನೀಡಿದ್ದು, ಬ್ಯಾಂಕ್‌ನಲ್ಲಿ 1,544.43 ಕೋಟಿ ರೂಪಾಯಿ ಮೊತ್ತದ 2,876 ಸಾಲಗಳಿಗೆ ಯಾವುದೇ ದಾಖಲೆಗಳಿಲ್ಲ ಎಂದು ಕರ್ನಾಟಕ ಕೋರ್ಟ್ ಗೆ ಮಾಹಿತಿ ನೀಡಿದೆ. ನಗರದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 1,544.43 ಕೋಟಿ ರೂಪಾಯಿ ಮೊತ್ತದ 2,876 ಸಾಲಕ್ಕೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ನಡೆಯುತ್ತಿರುವ ತನಿಖೆಯಿಂದ ತಿಳಿದುಬಂದಿದೆ ಎಂದು ಜಾರಿ ನಿರ್ದೇಶನಾಲಯ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಬ್ಯಾಂಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ, ಧರಣಿ ಎಂಟರ್‌ಪ್ರೈಸಸ್ ಮತ್ತು ಲಕ್ಷ್ಮಿ ರೈಸ್ ಕಾರ್ನರ್‌ನ ಮಾಲೀಕ ವಿಆರ್ ರಾಜೇಶ್ ಅವರ ಜಾಮೀನು ಅರ್ಜಿಗೆ ಸಲ್ಲಿಸಿದ ಆಕ್ಷೇಪಣೆಗಳಲ್ಲಿ ಇದನ್ನು ಬಹಿರಂಗಪಡಿಸಿದೆ. ರಾಜೇಶ್, ಆರೋಪಿ ನಂ.19, 2023ರ ಫೆಬ್ರವರಿ 21ರಂದು ಬಂಧಿಸಲಾಗಿತ್ತು.
ವಿದ್ಯಾರ್ಥಿಗಳಿಂದ ಕಾರು ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ
ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸುವುದು, ಶಿಕ್ಷಕರ ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ನಡೆಯುತ್ತಿವೆ. ಇದೀಗ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿಯ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ತನ್ನ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕ ಬಸವರಾಜ ರಕ್ಕಸಗಿ ಶಾಲಾ ಆವರಣದಲ್ಲಿಯೇ ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ಸ್ವಚ್ಚ ಮಾಡಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಕಾರನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸ್ಥಳಿಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಗಳನ್ನು ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಂಡ ಮುಖ್ಯ ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.