ರಾಜಕೀಯ

ಬೆಳಗಾವಿ ಚಳಿಗಾಲ ಅಧಿವೇಶನ: ಫಲಪ್ರದ ಚರ್ಚೆಯಾಗಲಿದೆಯೇ ಉತ್ತರ ಕರ್ನಾಟಕ ನೈಜ ಸಮಸ್ಯೆ ?

ಬೆಳಗಾವಿ ಚಳಿಗಾಲ ಅಧಿವೇಶನ: ಫಲಪ್ರದ ಚರ್ಚೆಯಾಗಲಿದೆಯೇ ಉತ್ತರ ಕರ್ನಾಟಕ ನೈಜ ಸಮಸ್ಯೆ ?
ಡಿ ಕೆ ಶಿವಕುಮಾರ್
Published On :

ಮುಂದಿನ ವಾರ ರಾಜ್ಯ ಆಡಳಿತ ಕೇಂದ್ರ ಬೆಳಗಾವಿಗೆ ಸ್ಥಳಾಂತರಗೊಳ್ಳಲಿದೆ. ಡಿಸೆಂಬರ್ 2ರಿಂದ 11ರವರೆಗೆ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ತ್ರಿವಳಿ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸಾಕಷ್ಟು ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲಾಗಿದ್ದರೂ, ಈ ಭಾಗದ ಜನರು ಅಧಿವೇಶನದ ಫಲಿತಾಂಶದ ಬಗ್ಗೆ ಅಷ್ಟೊಂದು ಆಶಾವಾದ ಹೊಂದಿಲ್ಲ. ಈ ಬಾರಿಯೂ ಜನರ ಜೀವನಮಟ್ಟ ಸುಧಾರಿಸಲು ಸಂಘಟಿತ ಪ್ರಯತ್ನಗಳನ್ನು ನಡೆಸುವ ಬದಲು ಆಡಳಿತ ಮತ್ತು ಪ್ರತಿಪಕ್ಷಗಳಿಗೆ ರಾಜಕೀಯವೇ ಮೇಲುಗೈ ಸಾಧಿಸಲಿದೆ ಎಂಬುದು ಅವರ ಅಭಿಪ್ರಾಯ. ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಶೇ.60ರಷ್ಟು ತಾಲೂಕುಗಳು ಮತ್ತು ಅತ್ಯಂತ ಹಿಂದುಳಿದ ಎಲ್ಲಾ ತಾಲೂಕುಗಳು ಉತ್ತರ ಕರ್ನಾಟಕದಲ್ಲಿವೆ.

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಭಾಪತಿಗಳು ಹಾಗೂ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಅಧಿವೇಶನದ ಚರ್ಚೆಗಳು ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರ ನೆರವಿಗೆ ಧಾವಿಸುವುದು, ಸುಸ್ಥಿರ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಗ್ರಾಮೀಣ ಆರೋಗ್ಯ ಸೌಲಭ್ಯಗಳು, ಸರ್ಕಾರಿ ಶಾಲೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸುಧಾರಿಸುವುದರತ್ತ ಗಮನಹರಿಸುವಂತೆ ನೋಡಿಕೊಳ್ಳಬೇಕು ಎಂಬುದು ಜನರ ನಿರೀಕ್ಷೆಯಾಗಿದೆ.

ಅರ್ಥಶಾಸ್ತ್ರಜ್ಞ ಪ್ರೊ. ಎಂ. ಗೋವಿಂದ ರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಪ್ರಾದೇಶಿಕ ಅಸಮಾನತೆಗೆ ಕಾರಣವಾದ ನಿರ್ದಿಷ್ಟ ಅಂಶಗಳನ್ನು ಗುರುತಿಸಿ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ನೀರಾವರಿ, ಕೃಷಿ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾಲಮಿತಿಯೊಳಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡಿದೆ.

ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಕೃಷಿಯಿಂದ ಕೈಗಾರಿಕೆ ಮತ್ತು ಸೇವಾ ವಲಯಗಳತ್ತ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ಈಗಲೂ ಕೃಷಿಯೇ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಗ್ರಾಮೀಣ ಜನರ ಜೀವನೋಪಾಯ ಸುಧಾರಿಸಬೇಕಾದರೆ ಕೃಷಿ ವಲಯದ ಉತ್ಪಾದಕತೆಯನ್ನು ಹೆಚ್ಚಿಸುವ ಅಗತ್ಯವಿದೆ.

ಹಿಂದುಳಿದ ಪ್ರದೇಶಗಳಲ್ಲಿರುವ ಹೆಚ್ಚಿನ ಜನರ ಜೀವನಮಟ್ಟ ಸುಧಾರಿಸಲು ಕಾರ್ಮಿಕರ ಅವಶ್ಯಕತೆ ಹೆಚ್ಚಿರುವ ಕೈಗಾರಿಕೆ ಮತ್ತು ಸೇವಾ ವಲಯಗಳತ್ತ ಬದಲಾವಣೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜೊತೆಗೆ ಕೃಷಿ ಉತ್ಪಾದಕತೆಯನ್ನೂ ಹೆಚ್ಚಿಸಬೇಕಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶೇಕಡಾವಾರು ಲೆಕ್ಕದಲ್ಲಿ ರಾಜಸ್ಥಾನ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ಬರಪೀಡಿತ ಪ್ರದೇಶವನ್ನು ಹೊಂದಿರುವ ಕರ್ನಾಟಕದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಬಹುಮುಖ ಕಾರ್ಯತಂತ್ರವನ್ನು ಸಮಿತಿ ಶಿಫಾರಸು ಮಾಡಿದೆ.

ಈ ವರ್ಷ ತೀವ್ರ ಬರದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸರ್ಕಾರ ಘೋಷಿಸಿರುವ ಪರಿಹಾರದ ಹೊರತಾಗಿ ಕೃಷಿ ಚಟುವಟಿಕೆಗಳ ಬಹುಪಾಲು ಜವಾಬ್ದಾರಿ ನಿರ್ವಹಿಸುವ ಮಹಿಳಾ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯೆ, ಅರ್ಥಶಾಸ್ತ್ರಜ್ಞೆ ಡಾ. ಸಂಗೀತಾ ಕಟ್ಟಿಮನಿ ಸಲಹೆ ನೀಡಿದ್ದಾರೆ.

ಇಂತಹ ಯೋಜನೆಯನ್ನು ಜಾರಿಗೊಳಿಸಿದರೆ ಕರ್ನಾಟಕ ದೇಶಕ್ಕೆ ಮಾದರಿ ರಾಜ್ಯವಾಗಲಿದೆ ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯ ಸದಸ್ಯೆ ಆಗಿದ್ದ ಡಾ. ಕಟ್ಟಿಮನಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಹಿಂದಿನ ಘೋಷಣೆಗಳನ್ನೇ ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಆರೋಪ ಮತ್ತು ಆರ್ಥಿಕ ನಿರ್ಬಂಧಗಳ ನಡುವೆ ಹೊಸ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ರಾಜ್ಯ ಸರ್ಕಾರ ಉನ್ನತಾಧಿಕಾರ ಸಮಿತಿಯ ವರದಿಯನ್ನು ತಾತ್ವಿಕವಾಗಿ ಅಂಗೀಕರಿಸಿದೆ. ಕಳೆದ ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾದೇಶಿಕ ಅಸಮತೋಲನ ನಿವಾರಣೆಗೆ 4,297 ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಬೆಳಗಾವಿ ಅಧಿವೇಶನದಲ್ಲಿ ಬಜೆಟ್ ಘೋಷಣೆಯ ಬಳಿಕ ಕೈಗೊಂಡಿರುವ ನಿರ್ದಿಷ್ಟ ಕ್ರಮಗಳು ಮತ್ತು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಯೋಜನೆಯನ್ನು ಸರ್ಕಾರ ಮಂಡಿಸಬೇಕು.

ಈ ಭಾಗದ ಜನಪ್ರತಿನಿಧಿಗಳು ಸ್ಪಷ್ಟ, ನಿರ್ದಿಷ್ಟ ಮತ್ತು ಕಾಲಮಿತಿಯ ಕ್ರಮಗಳಿಗೆ ಸರ್ಕಾರವನ್ನು ಒತ್ತಾಯಿಸಬೇಕು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟವು ಈ ಭಾಗದ ಯೋಜನೆಗಳ ಸಮರ್ಪಕ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ನಿರ್ಧಾರ ಕೈಗೊಂಡಿತ್ತು. ಆದರೆ, ಸಂಪುಟದ ಈ ನಿರ್ಧಾರ ಇನ್ನೂ ಜಾರಿಗೆ ಬಂದಿಲ್ಲ.

ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು, ಜನರಿಗೆ ಶುದ್ಧ ಕುಡಿಯುವ ನೀರನ್ನೂ ಒದಗಿಸಲು ಸಾಧ್ಯವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಳೆದ ಅಧಿವೇಶನದಲ್ಲಿ ಚರ್ಚೆಯಾದ ಬಹುತೇಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಅಧಿವೇಶನದ ಸಂದರ್ಭದಲ್ಲಿ ಸರ್ಕಾರ ಒದಗಿಸುವ ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನು ಸ್ವೀಕರಿಸಲು ಶಾಸಕರು ನಿರಾಕರಿಸಿದ್ದಾರೆ. 2024 ಮತ್ತು 2025ರ ಚಳಿಗಾಲದ ಅಧಿವೇಶನಗಳ ಸಂದರ್ಭದಲ್ಲೂ ಅವರು ಸರ್ಕಾರದ ಸೌಲಭ್ಯಗಳನ್ನು ತಿರಸ್ಕರಿಸಿದ್ದರು.

ಈ ಭಾಗದ ಜನಪ್ರತಿನಿಧಿಯಾಗಿ ರಾಜ್ಯ ಸರ್ಕಾರ ಮುಂದೆ ಅವರ ಬೇಡಿಕೆ ಸರಳವಾಗಿದೆ. ಮೂಲಸೌಕರ್ಯ, ನೀರಾವರಿ ಯೋಜನೆಗಳು, ಸಾಕಷ್ಟು ಸಂಖ್ಯೆಯ ವೈದ್ಯರನ್ನು ಹೊಂದಿರುವ ಕಾರ್ಯನಿರ್ವಹಣೆಯಲ್ಲಿರುವ ಆಸ್ಪತ್ರೆಗಳು, ಶಿಕ್ಷಕರಿರುವ ಶಾಲೆಗಳು ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಪದೇಪದೆ ಹೇಳಿಕೊಳ್ಳುವ ಸರ್ಕಾರದ ಮುಂದೆ ಇವು ದೊಡ್ಡ ಬೇಡಿಕೆಗಳೇನಲ್ಲ. ಆದರೆ, ಬೆಂಗಳೂರು ಕೇಂದ್ರಿತ ಆಡಳಿತ ಎಂಬ ಭಾವನೆ ಸ್ಥಳೀಯ ಜನರಲ್ಲಿ ಬಲವಾಗಿ ಬೇರೂರಿದೆ. ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವರು, ಉತ್ತರ ಕರ್ನಾಟಕದವರಷ್ಟೇ ಅಲ್ಲದೆ ಇತರ ಭಾಗಗಳ ಸಚಿವರೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಆಗಾಗ ಭೇಟಿ ನೀಡಿ, ಅಲ್ಲಿನ ನಿರ್ದಿಷ್ಟ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಲು ಮುಂದಾದರೆ ಸರ್ಕಾರಕ್ಕೆ ಅನುಕೂಲವಾಗಲಿದೆ.

ಇನ್ನೊಂದೆಡೆ, ರೈತರಿಗೆ ಎರಡು ಕಂತುಗಳಲ್ಲಿ ನೀಡುವುದಾಗಿ ಭರವಸೆ ನೀಡಿದ್ದ 5,000 ರೂಪಾಯಿ ಬರ ಪರಿಹಾರ, ಬೆಲೆ ಏರಿಕೆ, ಭ್ರಷ್ಟಾಚಾರದ ಆರೋಪಗಳು, ಹಣಕಾಸು ನಿರ್ವಹಣೆಯಲ್ಲಿನ ಅಕ್ರಮಗಳ ಆರೋಪ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳು ಮತ್ತು ಪಿಂಚಣಿ ಬಿಡುಗಡೆ ವಿಳಂಬ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬಹುಕೋಟಿ ರೂಪಾಯಿ ಮೌಲ್ಯದ ವಾಲ್ಮೀಕಿ ನಿಗಮದ ಹಣಕಾಸು ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್‌ಚಿಟ್ ನೀಡಿರುವುದು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕೂಡ ಚರ್ಚೆಗೆ ಬರುವ ಸಾಧ್ಯತೆಯಿದೆ.

ಇತ್ತೀಚಿನ ವಿಧಾನಪರಿಷತ್ ಚುನಾವಣೆಯಲ್ಲಿ 4-0 ಅಂತರದ ಗೆಲುವು ಸಾಧಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ಎದುರಿಸಲು ಜಂಟಿ ಕಾರ್ಯತಂತ್ರದೊಂದಿಗೆ ಬೆಳಗಾವಿಗೆ ಆಗಮಿಸಲಿದೆ.

2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿದ್ದಂತೆ, ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರ್ಚ್‌ಬಿಷಪ್ ಪೀಟರ್ ಮಚಾಡೊ ನೇತೃತ್ವದ ಅಲ್ಪಸಂಖ್ಯಾತ ಸಂಘಟನೆಗಳು ಕಾಯ್ದೆ ರದ್ದತಿಗೆ ಆಗ್ರಹಿಸುತ್ತಿವೆ. ಆದರೆ, ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಕಾಯ್ದೆ ಯಾವುದೇ ಧರ್ಮದ ಪರ ಅಥವಾ ವಿರುದ್ಧವಾಗಿಲ್ಲ. ಬಲವಂತದ ಮತಾಂತರ ತಡೆಯುವ ಉದ್ದೇಶ ಹೊಂದಿದೆ ಎಂದು ಸಮರ್ಥಿಸಿಕೊಳ್ಳುತ್ತಿವೆ.

ಈ ವಿಚಾರದಲ್ಲಿ ಅಧಿವೇಶನದ ವೇಳೆ ಸರ್ಕಾರ ಯಾವ ನಿಲುವು ತಳೆಯಲಿದೆ ಎಂಬುದರ ಮೇಲೆ ಸಾಕಷ್ಟು ಸಂಗತಿಗಳು ಅವಲಂಬಿತವಾಗಿವೆ. ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಾಸ್ತವಿಕ ಸಮಸ್ಯೆಗಳನ್ನು ರಾಜಕೀಯ ಚರ್ಚೆಗಳು ಮರೆಮಾಚದಂತೆ ಎಲ್ಲಾ ಪಕ್ಷಗಳ ಸದಸ್ಯರು ಎಚ್ಚರ ವಹಿಸಬೇಕು. ಹಾಗಾಗದಿದ್ದರೆ ಬೆಳಗಾವಿ ಅಧಿವೇಶನ ಮತ್ತೊಂದು ನಿರರ್ಥಕ ಕಸರತ್ತಾಗಿ ಉಳಿಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.