ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಗ್ರಾಮೀಣ ಗ್ರಂಥಾಲಯಗಳ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದು!

Manjula VN

ಬೆಂಗಳೂರು: ಯುವಜನರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಮತ್ತು ಓದುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ ಪ್ರದೇಶದ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದೆ.

5,895 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಪೈಕಿ 4,895 ಗ್ರಂಥಾಲಯಗಳ ನವೀಕರಣಕ್ಕೆ ಮಂಜೂರಾತಿ ನೀಡಲಾಗಿದೆ.

ಯೋಜನೆಯಲ್ಲಿ ಕಟ್ಟಡಗಳು, ಕೊಠಡಿಗಳು ಮತ್ತು ಕಪಾಟುಗಳ ನಿರ್ಮಾಣ ಮಾಡಲಾಗುತ್ತಿದ್ದು, ಹೊಸ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ಸಂಗ್ರಹವನ್ನು ಗ್ರಂಥಾಲಯಗಳಲ್ಲಿ ಇರಿಸಲಾಗುವುದು ಎಂದು ಆರ್‌ಡಿಪಿಆರ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಎಂ ಖರ್ಗೆ ಅವರು ಹೇಳಿದರು.

14ನೇ ಮತ್ತು 15ನೇ ಹಣಕಾಸು ಆಯೋಗದ ಅನುದಾನ ಅಥವಾ ಗ್ರಾಮ ಪಂಚಾಯತಿಯ ಸಂಪನ್ಮೂಲ ಬಳಸಿಕೊಂಡು ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೀಕರಿಸಲು ಕ್ರಮ ವಹಿಸಿದ್ದು, ಇಲ್ಲಿಯವರೆಗೆ 5,494 ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿಯ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನರ್ಜನೆ ಮುಂತಾದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಲಾಗಿತ್ತು,

ಘೋಷಣೆಯನ್ನು ಸಾಕಾರಗೊಳಿಸುವಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಪಾತ್ರವು ಹಿರಿದು ಹಾಗೂ ಮಹತ್ವ ಎಂದು ಪರಿಗಣಿಸಿ, ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಾದ ಅರಿವು ಕೇಂದ್ರಗಳ ಕೆಲಸದ ಸಮಯವನ್ನು 6 ರಿಂದ 8 ಗಂಟೆಗಳಿಗೆ ಏರಿಸಿ ಮಾಸಿಕ 16,382.52 ರೂ. ಮಾಸಿಕ ಕನಿಷ್ಠ ವೇತನ ಮತ್ತು 1542 ರೂ. ವ್ಯತ್ಯಯವಾಗುವ ತುಟ್ಟಿ ಭತ್ತೆ ಸೇರಿಸಿ ಮಾಸಿಕ 17,924.52 ರೂ, ಪಾವತಿಸಲಾಗುವುದು.

ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿಗಳಿಗೆ ವರ್ಗಾವಣೆಗೊಂಡ ನಂತರ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಅಭಿವೃದ್ಧಿಯಲ್ಲಿ ಅಗಾಧವಾದ ಸಾಧನೆಯಾಗಿದೆ ಎಂದು ಅವರು ಹೇಳಿದರು.

SCROLL FOR NEXT