ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ ಗೋಕಾಕ ಡಿಸಿಎಫ್ ಅಮಾನತು

Manjula VN

ಬೆಳಗಾವಿ: ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ ಆರೋಪದ ಮೇಲೆ ಐಎಫ್‌ಎಸ್‌ ಅಧಿಕಾರಿಯಾಗಿರುವ, ಗೋಕಾಕ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ರಾಯಭಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರನ್ನು ನಿಂದಿಸಿದ ಬಗ್ಗೆ ದೂರು ನೀಡಲಾಗಿತ್ತು. ಖುದ್ದು ಶಾಸಕ ದುರ್ಯೋಧನ ಔಹೊಳೇ ಅವರೂ ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತುಗೊಳಿಸಲಾಗಿದೆ.

ಗೋಕಾಕ ಅರಣ್ಯ ಉಪವಿಭಾಗ ವ್ಯಾಪ್ತಿಗೆ ರಾಯಬಾಗ ಕ್ಷೇತ್ರವು ಬರುತ್ತದೆ. ಕ್ಷೇತ್ರದಲ್ಲಿ ಅರಣ್ಯೀಕರಣ ಸೇರಿದಂತೆ ಹಲವು ವಿಚಾರದಲ್ಲಿ ಮಾತನಾಡಲು ಶಾಸಕ ದುರ್ಯೋಧನ ಐಹೊಳೆ ಮುಂದಾಗಿದ್ದರು. ಕೆಲವು ಯೋಜನೆಗಳ ಜಾರಿ ವಿಚಾರದಲ್ಲಿ ಶಾಸಕರ ಗಮನಕ್ಕೆ ತರದೇ ನಡೆಸಿದ ಬಗ್ಗೆಯೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಶಾಸಕರನ್ನು ಡಿಎಫ್‌ಒ ಅವರು ಏಕ ವಚನದಲ್ಲಿ ನಿಂದಿಸಿದ್ಧರು ಎನ್ನುವ ಆರೋಪಗಳೂ ಕೇಳಿ ಬಂದಿದ್ದವು. ಇಬ್ಬರ ನಡುವಿನ ಮಾತಿನ ಚಕಮಕಿಯ ಆಡಿಯೋ ಕೂಡ ವೈರಲ್‌ ಆಗಿತ್ತು.

ಅರಣ್ಯ ಇಲಾಖೆಯ ಅಧಿಕಾರಿ ಶಾಸಕರೊಬ್ಬರ ಹಕ್ಕುಗಳನ್ನೇ ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿದ್ಧಾರೆ. ಅವರ ವಿರುದ್ದ ಕ್ರಮ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ಎಚ್ಚರಿಕೆಯನ್ನು ಶಾಸಕ ದುರ್ಯೋಧನ ಐಹೊಳೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿದ ಕರ್ನಾಟಕ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಗೋಕಾಕ ಡಿಎಫ್‌ಒ ಅವರ ವಿರುದ್ದದ ಆರೋಪಗಳ ಕುರಿತು ಬೆಳಗಾವಿ ಹಿರಿಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದರು. ಇದನ್ನಾಧರಿಸಿ ಡಿಎಫ್‌ಒ ಅವರನ್ನು ಅಮಾನತುಗೊಳಿಸಲಾಗಿದೆ. ಬೆಳಗಾವಿಯ ಡಿಎಫ್‌ಒ ಎಸ್.ಕೆ.ಕಲ್ಲೋಳಿಕರ್‌ ಅವರಿಗೆ ಗೋಕಾಕ ವಿಭಾಗದ ಪ್ರಭಾರ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ತಮ್ಮ ಮೇಲೆ ಕೇಳಿ ಬಂದಿರುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಾನಂದ ನಾಯಕವಾಡಿ ಅವರು, ಹೊಸ ನಂಬರ್‌ನಿಂದ ಕರೆ ಬಂದಿತ್ತು. ಈ ಹಿಂದೆ ನನಗೆ ಕರೆ ಮಾಡಿದ್ದ ಗುತ್ತಿಗೆದಾರನೆಂದು ಭಾವಿಸಿ ಅನುಚಿತವಾಗಿ ಮಾತನಾಡಿದ್ದೆ. ಶಾಸಕರೆಂದು ತಿಳಿದ ಬಳಿಕ ಸೂಕ್ತ ಶಿಷ್ಟಾಚಾರದೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಅಖಿಲ ಭಾರತ ಸೇವಾ (ನಡತೆ) ನಿಯಮಗಳು, 1968 ರ ನಿಯಮ-3 ಅನ್ನು ಉಲ್ಲಂಘಿಸುವ ಉದ್ದೇಶವನ್ನೂ ಹೊಂದಿಲ್ಲ. ನನ್ನ ಮಾತಿನಿಂತ ಶಾಸಕರಿಗೆ ನೋವಾಗಿದ್ದರೆ, ಕ್ಷಣೆಯಾಚಿಸತ್ತೇನೆ. ಭವಿಷ್ಯದಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.

ಈ ನಡುವೆ ಘಟನೆ ಸಂಬಂಧ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥರು ವಿಚಾರಣೆ ನಡೆಸಿದ್ದು, ತಮ್ಮ ವರದಿಯಲ್ಲಿ ಡಿಸಿಎಫ್ ಉದ್ದೇಶಪೂರ್ವಕವಾಗಿ ಅನುಚಿತವಾಗಿ ವರ್ತಿಸಿದ್ದಾರೆ. ಶಾಸಕರು ಮಾತನಾಡುತ್ತಿದ್ದಾರೆಂದು ತಿಳಿದಿದ್ದರೂ ಕೂಡ ಗೌರವಯುತವಾಗಿ ಮಾತನಾಡಿಲ್ಲ. ಸಂಭಾಷಣೆಯ ಆಡಿಯೋ ನಮ್ಮ ಬಳಿಯಿದೆ ಎಂದು ಹೇಳಿದ್ದಾರೆ.

ಆದರೆ, ಈ ಮಾತುಕತೆಯ ವೇಳೆ ಡಿಸಿಎಫ್ ಮದ್ಯದ ಅಮಲಿನಲ್ಲಿದ್ದು, ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

SCROLL FOR NEXT