ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಬೆಳಗಾವಿಯಲ್ಲಿ ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ

Manjula VN

ಬೆಳಗಾವಿ: ಮುಗಳಖೋಡ ಪಟ್ಟಣ ಹೊರವಲಯದ ಜತ್ತ– ಜಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಕಾರು, ಎರಡು ಬೈಕುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಕಾರಿನಲ್ಲಿದ್ದ ಗುರ್ಲಾಪುರ ಗ್ರಾಮದ ಲಕ್ಷ್ಮಿ ರಾಮಪ್ಪ ಮರಾಠೆ (19) ಮಲ್ಲಿಕಾರ್ಜುನ ರಾಮಪ್ಪ ಮರಾಠೆ (16) ಆಕಾಶ ರಾಮಪ್ಪ ಮರಾಠೆ (14), ವಾಹನ ಚಾಲಕ ಏಕನಾಥ ಭೀಮಪ್ಪ ಪಡತರೆ (22), ಮುಗಳಖೋಡದ ಬೈಕ್ ಸವಾರ ನಾಗಪ್ಪ ಲಕ್ಷ್ಮಣ ಯಡವಣ್ಣವರ (48), ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಶಿಕ್ಷಕ ಹಣಮಂತ ಮಾಳಪ್ಪ ಮಳ್ಯಾಗೋಳ (42) ಮೃತಪಟ್ಟವರು.

ಗೋಕಾಕದ ಪಟ್ಟಣದ ನಿವಾಸಿ ಬೈಕ್ ಸವಾರ ಬಾಲಾನಂದ ಪರಪ್ಪ ಮಾಳಗೆ (37) ಗಾಯಗೊಂಡಿದ್ದು ಹಾರೂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಮೂಡಲಗಿಯಿಂದ ಹಾರೂಗೇರಿಗೆ ಹೊರಟಿತ್ತು. ಎದುರಿನಿಂದ ಎರಡು ಬೈಕುಗಳು ಬರುತ್ತಿದ್ದವು. ಮೂರೂ ವಾಹನಗಳು ಏಕಕಾಲಕ್ಕೆ ಡಿಕ್ಕಿ ಹೊಡೆದಿವೆ. ಅಪಘಾತ ತಪ್ಪಿಸಲು ಕಾರು ರಸ್ತೆ ಪಕ್ಕಕ್ಕೆ ಸರಿದು ಮರಕ್ಕೆ ಗುದ್ದಿ ಪಲ್ಟಿಯಾಗಿದೆ.

ಅಪಘಾತದ ರಭಸ ಎಷ್ಟಿತ್ತೆಂದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ನಾಲ್ವರೂ ಹಾಗೂ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸಹಾಯಕ್ಕೆ ಧಾವಿಸಿದ ಜನ ಕಾರಿನ ಗಾಜು, ಬಾಗಿಲು ಒಡೆದು ಜನರನ್ನು ಹೊರತೆಗೆದಿದ್ದಾರೆ. ಆದರೆ, ಅಷ್ಟರೊಳಗೆ ಎಲ್ಲರೂ ಜೀವ ಬಿಟ್ಟಿದ್ದರು.

ಬೈಕ್‌ ಸವಾರರ ಶವಗಳು ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಆರೂ ಶವಗಳನ್ನು ರಸ್ತೆ ಪಕ್ಕದಲ್ಲಿ ಇರಿಸಿದ ದೃಶ್ಯ ಮನ ಕಲಕುವಂತಿತ್ತು. ಸ್ಥಳಕ್ಕೆ ಬಂದ ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

3 ದಿನದಲ್ಲಿ 25 ಸಾವು

ಖಾನಾಪುರ ತಾಲ್ಲೂಕಿನ ಮಂಗೇನಕೊಪ್ಪ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾರೂಗೇರಿಯ ನಿವಾಸಿ ಸುಫಿಯಾ ಜಮಾದಾರ ಶುಕ್ರವಾರ ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಏಳಕ್ಕೆ ಏರಿದೆ.

ಇದರಂತೆ ಕಳೆದ ಮೂರು ದಿನಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಟ್ಟು 25 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಜನರು ಸಂಚಾರ ನಿಯಮಗಳನ್ನು ಮಾಡಬೇಕು. ಅತಿವೇಗದ ಚಾಲನೆ ಮಾಡದೆ, ಜೀವಗಳ ರಕ್ಷಣೆ ಮಾಡಬೇಕು ಎಂದು ಬಳಗಾವಿ ಜಿಲ್ಲೆಯ ಎಸ್'ಪಿ ಭೀಮಾಶಂಕರ್ ಗುಳೇದ್ ಅವರು ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT