ಜಯಪ್ರಕಾಶ್ ಹೆಗ್ಡೆ
ಜಯಪ್ರಕಾಶ್ ಹೆಗ್ಡೆ 
ರಾಜ್ಯ

ಜಾತಿ ಗಣತಿ ವರದಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು: ಜಯಪ್ರಕಾಶ್ ಹೆಗ್ಡೆ

Ramyashree GN

ಬೆಂಗಳೂರು: ಜಾತಿ ಗಣತಿ ವರದಿ ಎಂದು ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆ ವರದಿಯನ್ನು ಗುರುವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಘೋಷಿಸಿದ್ದಾರೆ.

ಫೆಬ್ರುವರಿ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೇಂಬರ್‌ನಲ್ಲಿ ವರದಿಯನ್ನು ಸಲ್ಲಿಸಲಾಗುವುದು. ವರದಿ ಸಿದ್ಧವಾಗಿದ್ದು, ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಮಾತ್ರ ಬಾಕಿ ಇದೆ ಎಂದಿದ್ದಾರೆ.

'ಇಂದು (ಗುರುವಾರ) ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದೇವೆ. ಸ್ಥಳ ಇನ್ನೂ ನಿಗದಿಯಾಗಬೇಕಿದೆ. ಸ್ಥಳವನ್ನು ನಿರ್ಧರಿಸಿದ ನಂತರ, ನಾವು ಸಭೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ' ಎಂದು ಅವರು ಎಎನ್‌ಐಗೆ ತಿಳಿಸಿದರು.

'ನಮ್ಮ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮುದ್ರಣ ಕಾರ್ಯವೂ ಪೂರ್ಣಗೊಂಡಿದೆ. ಸರ್ಕಾರಕ್ಕೆ ಒಪ್ಪಿಸುವುದಷ್ಟೇ ಬಾಕಿಯಿದೆ. ಇದು ಹಿಂದುಳಿದ ವರ್ಗಗಳ ಆಯೋಗದ ವರದಿ' ಎಂದರು.

'ನಮ್ಮ ಯಾವುದೇ ದಾಖಲೆಗಳು ಕಳೆದು ಹೋಗಿಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ. ನಮ್ಮ ವರದಿಯ ಅಂಶಗಳನ್ನು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ. ಅದು ಸರ್ಕಾರದ ಕೆಲಸ. ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದು ನಮ್ಮ ಕೆಲಸ. ಈ ಸಂದರ್ಭದಲ್ಲಿ ಆಯೋಗದ ಎಲ್ಲ ಸದಸ್ಯರು ನಮ್ಮೊಂದಿಗಿದ್ದಾರೆ' ಎಂದು ಸ್ಪಷ್ಟಪಡಿಸಿದರು.

ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದ ಅವಧಿ ಫೆಬ್ರುವರಿ 29ಕ್ಕೆ ಕೊನೆಗೊಳ್ಳಲಿದೆ.

ಎಚ್‌ಎ ಕಾಂತರಾಜ್ ನೇತೃತ್ವದ ಆಯೋಗ ಸಿದ್ಧಪಡಿಸಿದ ವರದಿಯ ದತ್ತಾಂಶವನ್ನು ಬಳಸಿಕೊಂಡು ಈ ಆಯೋಗವು ಪರಿಷ್ಕೃತ ವರದಿಯನ್ನು ಸಿದ್ಧಪಡಿಸಲಾಗಿದೆ. ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ವರದಿ ಕೈಸೇರಿದ ನಂತರ ಸರ್ಕಾರದ ಮುಂದಿನ ನಿರ್ಧಾರ ಏನು ಎಂಬುದು ಕುತೂಹಲ ಮೂಡಿಸಿದೆ.

ಇದಕ್ಕೂ ಮುನ್ನ ಮಾತನಾಡಿದ ಲಿಂಗಾಯತ ಮುಖಂಡ, ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ, ಸರಿಯಾದ ರೀತಿಯಲ್ಲಿ ನಡೆಯಬೇಕಿದೆ ಎಂದಿದ್ದರು.

ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಬಹುದು ಹಾಗಾಗಿ ವೈಜ್ಞಾನಿಕ ವರದಿ ನೀಡುವಂತೆ ಒತ್ತಾಯಿಸಿದರು.

ಈ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ವರದಿಯಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಸಲ್ಲಿಕೆಯಾಗಲಿ ಮತ್ತು ವರದಿ ನೋಡಿ ನಂತರ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.

SCROLL FOR NEXT