ರಾಜ್ಯಪಾಲ ತಾವರಚಂದ್ ಗೆಹ್ಲೋಟ್
ರಾಜ್ಯಪಾಲ ತಾವರಚಂದ್ ಗೆಹ್ಲೋಟ್ 
ರಾಜ್ಯ

ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ವಿಧಾನಸಭೆಯಲ್ಲಿ ಮತ್ತೆ ಅಂಗೀಕಾರ; ರಾಜ್ಯಪಾಲರು ಅಂಕಿತ ಹಾಕುವರೇ?

Lingaraj Badiger

ಬೆಂಗಳೂರು: ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಅನ್ನು ಗುರುವಾರ ಮತ್ತೆ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿದೆ. ಆದರೆ ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕುವರೇ ಅಥವಾ ಇಲ್ಲವೇ? ಎಂಬುದು ಈಗ ಕುತೂಹಲ ಮೂಡಿಸಿದೆ.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ವಿಧೇಯಕ ಮಂಡಿಸಿ, ಮತ್ತೊಮ್ಮೆ ಪರ್ಯಾಲೋಚನೆ ಮಾಡಿ ಅಂಗೀಕಾರ ನೀಡುವಂತೆ ಕೋರಿದರು. ಪ್ರತಿಪಕ್ಷ ಸಭಾತ್ಯಾಗ ಮಾಡಿದ್ದರಿಂದ ಕೇವಲ ಆಡಳಿತ ಶಾಸಕರು ಮಾತ್ರ ಸದನದಲ್ಲಿದ್ದರು. ಸ್ಪೀಕರ್ ಯು.ಟಿ.ಖಾದರ್ ಅವರು ಮತಕ್ಕೆ ಹಾಕಿದಾಗ, ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರ, ಈ ತಿದ್ದುಪಡಿ ಮಸೂದೆಗೆ ಇಂದು ಎರಡನೇ ಬಾರಿ ಅಂಗೀಕಾರ ಪಡೆದುಕೊಂಡಿದೆ. ಈಗ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದೆ ಮತ್ತು ರಾಜ್ಯಪಾಲರು ಸಹಿ ಹಾಕಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ.

ವಿಧಾನ ಪರಿಷತ್​ನಲ್ಲಿ ಬಹುಮತ ಹೊಂದಿರುವ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರೋಧದಿಂದಾಗಿ ಈ ವಿಧೇಯಕ ತಿರಸ್ಕೃತಗೊಂಡಿತ್ತು. ಹೀಗಾಗಿ, ಸಂಸದೀಯ ನಿಯಮಾವಳಿಗಳಂತೆ ತಿರಸ್ಕೃತ ವಿಧೇಯಕವನ್ನು ಮತ್ತೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡರೆ ಅದಕ್ಕೆ ಪರಿಷತ್ ನಲ್ಲಿ ಅಂಗೀಕಾರ ಪಡೆಯುವ ಅಗತ್ಯ ಇಲ್ಲ. ಅದನ್ನು ನೇರವಾಗಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ.

ವಾರ್ಷಿಕ ಒಂದು ಕೋಟಿ ರೂ.ಗಳ ಆದಾಯ ಮೀರುವ ಹಿಂದೂ ದೇಗುಲಗಳು ತಮ್ಮ ಈ ಆದಾಯದ ಶೇ.10 ರಷ್ಟನ್ನು ಸರ್ಕಾರಕ್ಕೆ ಕೊಡಬೇಕು. ಹತ್ತು ಲಕ್ಷ ರೂ.ಗಳಿಂದ ಒಂದು ಕೋಟಿ ರೂ. ಒಳಗಿನ ಆದಾಯ ಹೊಂದಿರುವ ದೇಗುಲಗಳು ಶೇ.5ರಷ್ಟನ್ನು ನೀಡಬೇಕು ಎಂಬುದು ತಿದ್ದುಪಡಿ ವಿಧೇಯಕದ ಮುಖ್ಯಾಂಶ. ಆದ್ದರಿಂದಲೇ ಇದಕ್ಕೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು.

SCROLL FOR NEXT