ರಾಜ್ಯ

ನಮ್ಮ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಅನಿಲ ದಾಳಿ ಅಣಕು ಪ್ರದರ್ಶನ

Srinivasamurthy VN

ಬೆಂಗಳೂರು: ನಮ್ಮ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಸಂಭಾವ್ಯ ಅನಿಲ ದಾಳಿ ಅಣಕು ಪ್ರದರ್ಶನ ನಡೆಯಿತು.

ವಿಧಾನಸೌಧ ಡಾ.ಬಿ.ಆರ್‌. ಅಂಬೇಡ್ಕರ್‌ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಶನಿವಾರ ಸಂಭಾವ್ಯ ಅನಿಲ ಮತ್ತು ರಾಸಾಯನಿಕ ದಾಳಿಯನ್ನು ತಡೆಯುವ ಅಣಕು ಪ್ರದರ್ಶನ ನಡೆಸಲಾಯಿತು. ಯಾವುದೇ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ನ್ಯೂಕ್ಲಿಯರ್‌ ಮೆಟೀರಿಯಲ್ (ಸಿಬಿಆರ್‌ಎನ್‌) ದಾಳಿಯ ಸಂದರ್ಭದಲ್ಲಿ ಎಲ್ಲ ಕಾರ್ಯ ವಿಧಾನಗಳ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ವೈದ್ಯಕೀಯ ಸೇವಾ ಸಂಸ್ಥೆಗಳು ಈ ಅಣಕು ಪ್ರದರ್ಶನ ನಡೆಸಿದವು.

ಸಾರ್ವಜನಿಕ ಪ್ರಕಟಣೆಗಳ ಮೂಲಕ ಅಣಕು ಪ್ರದರ್ಶನದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು. ಅಣಕು ಪ್ರದರ್ಶನದ ಸಮಯದಲ್ಲಿ, ರಾಸಾಯನಿಕಗಳನ್ನು ಬಳಸಿ ಹಾನಿಕಾರಕವಲ್ಲದ ಬಣ್ಣದ ಹೊಗೆಯನ್ನು ನಿಲ್ದಾಣದ ಆವರಣದಲ್ಲಿ ಹೊಗೆ ಬಾಂಬ್‌ಗೆ ಹೋಲುವ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಮೆಟ್ರೊ ಸಿಬ್ಬಂದಿ ಪ್ರಯಾಣಿಕರಂತೆ ಬಂದು ಮೂರ್ಛೆ ಹೋದಂತೆ ನಟಿಸಿದರು.

ಹೊಗೆ ಹರಡುವ ಮತ್ತು ನಿಯಂತ್ರಿಸಲಾಗದ ಕಾರಣ ವಿಪತ್ತು ನಿರ್ವಹಣಾ ಸಂಸ್ಥೆಯ ಮಧ್ಯಸ್ಥಿಕೆಗಾಗಿ ನಿಲ್ದಾಣದ ಅಧಿಕಾರಿಗಳು ಕೇಂದ್ರ ಕಮಾಂಡ್‌ ಮತ್ತು ಭದ್ರತಾ ಕಣ್ಗಾವಲುಗಳಿಗೆ ಮಾಹಿತಿ ನೀಡಿದರು. ನಿಲ್ದಾಣದೊಳಗೆ ಪ್ರಯಾಣಿಕರ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು. ನಿಲ್ದಾಣದ ಒಳಗಿರುವ ಪ್ರಯಾಣಿಕರಿಗೆ ನಿಲ್ದಾಣದಿಂದ ತರಾತುರಿಯಿಂದ ಹೊರಬರುವಂತೆ ಸೂಚಿಸಲಾಯಿತು. ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡದಂತೆ ರೈಲು ನಿರ್ವಾಹಕರಿಗೆ ಸೂಚನೆ ನೀಡಲಾಯಿತು.

ರಾಸಾಯನಿಕ ಕಂಟೈನರ್‌ ಅನ್ನು ಮುಚ್ಚಿ ಪ್ರದೇಶವನ್ನು ಸೋಂಕು ರಹಿತಗೊಳಿಸಿದರು. ನಿಲ್ದಾಣದ ಹವಾನಿಯಂತ್ರಣವನ್ನು ಸ್ಥಗಿತಗೊಳಿಸಿ, ಹೊಗೆ ತೆಗೆಯುವ ಸುರಕ್ಷಿತ ಸ್ವಯಂಚಾಲಿತ ವ್ಯವಸ್ಟೆಯನ್ನು ಸಕ್ರಿಯಗೊಳಿಸಲಾಯಿತು. ಎನ್‌ಡಿಆರ್‌ಎಫ್‌ ಅನುಮತಿಸಿದ ನಂತರ ರೈಲು ಸಂಚಾರವನ್ನು ಪುನರಾರಂಭಿಸಲಾಯಿತು.
 

SCROLL FOR NEXT