ಬೆಂಗಳೂರು: ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಬಿಡುಗಡೆ ಮಾಡಿದ ಹಣಕ್ಕೆ ಹೋಲಿಸಿದರೆ ಕೇಂದ್ರದ ಮೋದಿ ಸರ್ಕಾರ ಶೇ 244 ರಷ್ಟು ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ ಎಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರವು ತೆರಿಗೆ ಹಂಚಿಕೆಯಡಿ 81,795 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಒಟ್ಟು 2,80,130 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ: ಹೇಳಿಕೆಗೆ ಬದ್ಧ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಬ್ಬರೂ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಸುಳ್ಳುಗಳನ್ನು ಹಬ್ಬಿಸುವಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. “ರಾಜ್ಯದಲ್ಲಿ ವಸತಿ ಯೋಜನೆಗಳು ಮತ್ತು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣದ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ಚರ್ಚೆಗೆ ಬರಲಿ. ತಮ್ಮ ಅಂಕಿಅಂಶಗಳನ್ನು ಬಹಿರಂಗಪಡಿಸಲಿ. ನಾವೂ ನಮ್ಮಲ್ಲಿರುವ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತೇವೆ ಎಂದು ಸವಾಲು ಹಾಕಿದರು.
ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತೆರಿಗೆ ಸಂಗ್ರಹಿಸುವ ಬದಲು ಕೇಂದ್ರವು ಸೆಸ್/ಸರ್ಚಾರ್ಜ್ ವಿಧಿಸುತ್ತಿರುವುದರಿಂದ ಹಣ ಹಂಚಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಆರೋಪಿಸಿದ್ದರು.