ರಾಜ್ಯ

2022 ಬೆಂಗಳೂರು ಪ್ರವಾಹ: ವರ್ಷ ಕಳೆದರೂ ಇನ್ನೂ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ!

Manjula VN

ಬೆಂಗಳೂರು: 2022 ರಲ್ಲಿ ನಗರದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂತ್ರಸ್ತರಿಗೆ ವರ್ಷ ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ.

ಮಳೆಯಿಂದಾಗಿ 2022ರಲ್ಲಿ ಮಹದೇವಪುರ ವಲಯದಲ್ಲಿ ಹಠಾತ್ ಪ್ರವಾಹ ಎದುರಾಗಿತ್ತು. ಇದರಿಂದ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಈ ವೇಳೆ ರಾಜ್ಯ ಸರ್ಕಾರವು ಹಾನಿಯ ಆಧಾರದ ಮೇಲೆ 10,000 ರಿಂದ 25,000 ರೂಪಾಯಿಗಳ ಪರಿಹಾರವನ್ನು ಘೋಷಿಸಿತ್ತು. ಆದರೆ, ವರ್ಷ ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ.

ಮಾರತ್ತಹಳ್ಳಿ ವಾರ್ಡ್‌ನ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ರಮೇಶ್ ಎನ್ ಅವರು ಮಾತನಾಡಿ, 2022ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ನನ್ನ ವಾರ್ಡ್ ಮೇಲೆ ಕೂಡ ಈ ಪ್ರವಾಹ ಪರಿಣಾಮ ಬೀರಿತ್ತು. 150 ಕ್ಕೂ ಹೆಚ್ಚು ಮನೆಗಳ ಮೇಲೆ ಪರಿಣಾಮ ಬೀರಿತ್ತು. ಪ್ರವಾಹಕ್ಕೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಇನ್ನೂ ಜನರಿಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಹಠಾತ್ ಪ್ರವಾಹದಿಂದಾಗಿ “ಬಾಲಾಜಿ ಲೇಔಟ್, ವಿನಾಯಕ ಲೇಔಟ್, ದೀಪಾ ನರ್ಸಿಂಗ್ ಹೋಮ್ ಲೇಔಟ್ ಮತ್ತು ಕೃಷ್ಣಪ್ಪ ಲೇಔಟ್ ಮುಂತಾದ ಪ್ರದೇಶಗಳು ಜಲಾವೃತಗೊಂಡಿತ್ತು. ನೆಲ ಅಂತಸ್ತಿನ ಹಲವು ಮನೆಗಳು ಅಪಾರ ಹಾನಿಯನ್ನು ಅನುಭವಿಸಿದ್ದವು. ಹಾನಿಗೆ ಅನುಗುಣವಾಗಿ 10 ರಿಂದ 25 ಸಾವಿರ ರೂ.ವರೆಗೆ ಪರಿಹಾರ ನೀಡುವಂತೆ ಬಿಬಿಎಂಪಿಗೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಿಮ್ಮ ‘ಬಾಗಿಲಿಗೆ ಸರ್ಕಾರ’ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗಿತ್ತು. ಮನವಿಗಳನ್ನು ಪರಿಶೀಲಿಸಿದ ಡಿಸಿಎಂ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಪರಿಹಾರ ಸಿಗುವ ವಿಶ್ವಾಸವದೆ ಎಂದು ಹೇಳಿದರು.

ಬಾಲಾಜಿ ಲೇಔಟ್ ನಿವಾಸಿ ಮಂಜುನಾಥ್ ಎಂಬುವವರು ಮಾತನಾಡಿ, ಕೆಲ ರಾಜಕೀಯ ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮೂರು ದಿನಗಳ ಕಾಲ ಬಿಸ್ಕೆಟ್, ಹಾಲು, ಕುಡಿಯುವ ನೀರು ಸರಬರಾಜು ಮಾಡಿದ್ದರು. ಸಮಸ್ಯೆ ಪರಿಹಾರವಾದ ಕೂಡಲೇ ನಾವು ಅಂದಿನ ಜಂಟಿ ಆಯುಕ್ತ ವೆಂಕಟಾಚಲಪತಿ ಅವರನ್ನು ಭೇಟಿ ಮಾಡಿ ಪ್ರವಾಹದಿಂದ ಉಂಟಾದ ಹಾನಿಗಳ ಬಗ್ಗೆ ಏನಾದರೂ ಮಾಡುವಂತೆ ಮನವಿ ಮಾಡಿದ್ದೆವು. ಆದರೆ, ಈ ವರೆಗೂ ಏನನ್ನೂ ಮಾಡಿಲ್ಲ. ಇದೀಗ ಈಗ ಸರ್ಕಾರ, ಜಂಟಿ ಆಯುಕ್ತರು, ವಲಯ ಆಯುಕ್ತರು ಬದಲಾಗಿದ್ದಾರೆ.

ಹೊಸ ಜಂಟಿ ಆಯುಕ್ತೆ ದಾಕ್ಷಾಯಿಣಿ ಅವರು ಹಳೆಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ, ಪರಿಹಾರ ದೊರಕಿಸಿಕೊಡಲು ಸಹಾಯ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

SCROLL FOR NEXT