ರಾಜ್ಯ

ಬುದ್ದ, ಬಸವೇಶ್ವರ, ಅಂಬೇಡ್ಕರ್‌'ರನ್ನು ದೇವರೆಂದರೆ ತಪ್ಪಿಲ್ಲ: ಹೈಕೋರ್ಟ್‌

Manjula VN

ಬೆಂಗಳೂರು: ಜನಪ್ರತಿನಿಧಿಗಳು ದೇವರ ಬದಲು ಅಂಬೇಡ್ಕರ್‌, ಬುದ್ಧ, ಬಸವೇಶ್ವರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ತಪ್ಪಲ್ಲ ಎಂದು ಹೈಕೋರ್ಟ್ ಸೋಮವಾರ ಹೇಳಿದೆ.

ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರು ಸಂವಿಧಾನದ ಮೂರನೇ ಷೆಡ್ಯೂಲ್‌ ಅಡಿ ನಿಬಂಧನೆಗೆ ವಿರುದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಈಚೆಗೆ ವಜಾ ಮಾಡಿದ್ದು, ಬುದ್ದ, ಬಸವೇಶ್ವರ ಮತ್ತು ಅಂಬೇಡ್ಕರ್‌ ಅವರನ್ನು ದೈವ ಸ್ವರೂಪಿಗಳು ಎಂದು ಪರಿಗಣಿಸಲಾಗಿದೆ. ಸಂವಿಧಾನವು 'ದೇವರು' ಅನ್ನು ಸೂಚಿಸಲು ಬಳಸಿರುವ ಅರ್ಥ ಅದೇ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡುವಾಗ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಮೇಲಿನಂತೆ ಹೇಳಿದೆ.

“ಕೆಲವು ಸಂದರ್ಭಗಳಲ್ಲಿ ಮೇರು ವ್ಯಕ್ತಿತ್ವಗಳಾದ ಭಗವಾನ್‌ ಬುದ್ದ (ಕ್ರಿ ಪೂ 563-483), ಜಗಜ್ಯೋತಿ ಬಸವೇಶ್ವರ (1131-1196), ಡಾ. ಬಿ ಆರ್‌ ಅಂಬೇಡ್ಕರ್‌ (1891-1956) ಇತರರನ್ನು 'ದೈವಾಂಶ ಸಂಭೂತರು' ದೇವರ ಅವತಾರ ಎನ್ನಲಾಗಿದೆ. ಇಂಗ್ಲಿಷ್‌ನಲ್ಲಿ 'ದೇವರು' ಎಂದು ಉಲ್ಲೇಖಿಸಲಾಗಿರುವುದರ ಅರ್ಥವು ಇದಕ್ಕೆ ಸಮೀಪದ್ದಾಗಿದೆ” ಎಂದು ನ್ಯಾಯಾಲಯದ ಆದೇಶದಲ್ಲಿ ವಿವರಿಸಲಾಗಿದೆ.

ಮುಂದುವರಿದು, “ಕನ್ನಡದಲ್ಲಿ ದೇವನೊಬ್ಬ, ನಾಮ ಹಲವು” ಎನ್ನಲಾಗುತ್ತದೆ. “ಬೃಹದರಣ್ಯಕ ಉಪನಿಷತ್”ನಲ್ಲಿ ಸತ್ಯ ಒಂದೇ ಆದರೆ ತಿಳಿದವರು ವಿವಿಧ ಹೆಸರಿನಿಂದ ಸಂಭೋದಿಸುತ್ತಾರೆ ಎಂದು ಹೇಳಲಾಗಿದೆ. ದೇವರ ಹೆಸರಿನಲ್ಲಿ ಅಥವಾ ವಿಧ್ಯುಕ್ತ ರೀತ್ಯಾ ಪ್ರಮಾಣ ಸ್ವೀಕರಿಸಲು ಮೂರನೇ ಷೆಡ್ಯೂಲ್‌ನಲ್ಲಿ ಅನುಮತಿ ಇದೆ ಎಂಬುದನ್ನು ತಿಳಿಯಬಹುದು” ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ ನ್ಯಾಯಾಲಯವು “ದೇವರ ಹೆಸರಿನಲ್ಲಿ ಅಥವಾ ದೇವರ ಹೆಸರು ಉಲ್ಲೇಖಿಸದೆಯೂ ಪ್ರಮಾಣ ವಚನ ಸ್ವೀಕರಿಸಬಹುದಾಗಿದೆ” ಎಂದು ಸ್ಪಷ್ಟಪಡಿಸಿದೆ.

SCROLL FOR NEXT