ರಾಜ್ಯ

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: 30ಕ್ಕೂ ಹೆಚ್ಚು ಕಡೆ ಪರಿಶೀಲನೆ; ಕಂತೆ ಕಂತೆ ನೋಟು, ಚಿನ್ನಾಭರಣ ಪತ್ತೆ

Manjula VN

ಬೆಂಗಳೂರು: ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಬೆಂಗಳೂರು, ಬಳ್ಳಾರಿ, ರಾಮನಗರ ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ನೋಟು, ಚಿನ್ನ, ಬೆಳ್ಳಿ ಆಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮುಖ್ಯ ಜನರಲ್ ಮ್ಯಾನೇಜರ್ ಎಂ ಎಲ್ ನಾಗರಾಜ್ ಅವರ ಆಸ್ತಿಗಳ ಶೋಧ ಕಾರ್ಯಾಚರಣೆಯು ನಡೆಯುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇದಲ್ಲದೆ ಬೆಂಗಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಡಿಎಂ ಪದ್ಮನಾಭ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ.

ಬೆಂಗಳೂರಿನ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್ ಸತೀಶ್, ಬೆಂಗಳೂರಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಸೈಯದ್ ಮುನೀರ್ ಅಹಮದ್, ಚೆನ್ನೇನಹಳ್ಳಿ ಗ್ರಾ.ಪಂ.ಸದಸ್ಯ ಎಚ್.ಎಸ್.ಸುರೇಶ್ ಮತ್ತು ರಾಮನಗರದ ನಗರ ಮತ್ತು ಗ್ರಾಮಾಂತರ ಯೋಜನೆಯ ಸದಸ್ಯ ಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕ ಮಂಜೇಶ್ ಬಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಬೆಸ್ಕಾಂ ಮುಖ್ಯ ಜನರಲ್ ಮ್ಯಾನೇಜರ್ ಎಂಎಲ್ ನಾಗರಾಜು ವಿರುದ್ಧ ದಾಖಲಾದ ಅಕ್ರಮ ಆಸ್ತಿ ಪ್ರಕರಣದ ಆಧಾರದ ಮೇಲೆ ಕೂಡ್ಲಿಗಿ, ಬಳ್ಳಾರಿಯ ಐದು ಸ್ಥಳಗಳಲ್ಲಿ ಮತ್ತು ಬೆಂಗಳೂರು ನಗರದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಒಂಬತ್ತು ನಿವೇಶನ, ಮೂರು ಮನೆ, ಎರಡು ಪೆಟ್ರೋಲ್ ಬಂಕ್, ಶಿಕ್ಷಣ ಸಂಸ್ಥೆಗಳು ಹಾಗೂ ನಾಲ್ಕು ಕಡೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ," ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತುಮಕೂರಿನಲ್ಲಿ ತೋಟದ ಮನೆ, ಸೋಮಾಪುರದಲ್ಲಿ ವಾಣಿಜ್ಯ ಕಟ್ಟಡ ಮತ್ತು ಕೈಗಾರಿಕಾ ಶೆಡ್‌ನೊಂದಿಗೆ ಐದು ಎಕರೆ ಕೃಷಿ ಭೂಮಿ, ಕುಂದಾಣ ಗ್ರಾಪಂ ಪಿಡಿಒ ಪದ್ಮನಾಭ್‌ಗೆ ಸೇರಿದ ಎಜಿಬಿ ಲೇಔಟ್‌ನಲ್ಲಿ ನಾಲ್ಕು ಅಂತಸ್ತಿನ ಮನೆ ಕೂಡ ಶೋಧದ ವೇಳೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.

ನಂಜೇಗೌಡ ನಿವಾಸದಲ್ಲಿ ಮುಂದುವರಿದ ಶೋಧ ಕಾರ್ಯ
ಈ ನಡುವೆ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯ ನಂಜೇಗೌಡ ನಿವಾಸ, ನಂಜುಂಡೇಶ್ವರ ಸ್ಟೋನ್ ಕ್ರಷರ್, ಕೋಚಿಮುಲ್  ಕೇಂದ್ರ ಕಚೇರಿಯಲ್ಲಿ ಶೋಧ ನಡೆಯುತ್ತಿದೆ. ನಿನ್ನೆಯಿಂದ ಶಾಸಕ ನಂಜೇಗೌಡ ಹಾಗು ಕುಟುಂಬಸ್ಥರನ್ನ ಹೊರಗೆ ಕಳುಹಿಸದೇ ಮನೆಯಲ್ಲಿರೋ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ.

SCROLL FOR NEXT