ಸಂಗ್ರಹ ಚಿತ್ರ 
ರಾಜ್ಯ

ಸೇನೆಯಲ್ಲಿನ ನರ್ಸಿಂಗ್ ಸೇವೆಗೆ ಶೇ.100ರಷ್ಟು ಮಹಿಳೆಯರಿಗೆ ಅವಕಾಶ: ಅಸಾಂವಿಧಾನಿಕ ಎಂದ ಹೈಕೋರ್ಟ್

ಸೇನೆಯಲ್ಲಿ ನರ್ಸಿಂಗ್ ಸೇವೆಗೆ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಭಾರತೀಯ ಮಿಲಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ 1943ರ ಸೆಕ್ಷನ್ 6 ರಲ್ಲಿದ್ದ 'ಮಹಿಳೆಯಾಗಿದ್ದರೆ' ಎಂಬ ಪದವನ್ನು ಹೈಕೋರ್ಟ್ ಅಸಾಂವಿಧಾನಿಕ ಎಂದು ಘೋಷಣೆ ಮಾಡಿದೆ.

ಬೆಂಗಳೂರು: ಸೇನೆಯಲ್ಲಿ ನರ್ಸಿಂಗ್ ಸೇವೆಗೆ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಭಾರತೀಯ ಮಿಲಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ 1943ರ ಸೆಕ್ಷನ್ 6 ರಲ್ಲಿದ್ದ 'ಮಹಿಳೆಯಾಗಿದ್ದರೆ' ಎಂಬ ಪದವನ್ನು ಹೈಕೋರ್ಟ್ ಅಸಾಂವಿಧಾನಿಕ ಎಂದು ಘೋಷಣೆ ಮಾಡಿದೆ.

ಈ ರೀತಿಯ ಮೀಸಲಾತಿ ನೀಡುವುದು ಸಂವಿಧಾನದ ಪರಿಚ್ಛೇದ 14(ಸಮಾನತೆ), 16(2)(ಲಿಂಗ ತಾರತಮ್ಯ) ಹಾಗೂ 21(ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತಾಗಲಿದೆ ಎಂದು ಧಾರವಾಡ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟು, 81 ವರ್ಷಗಳ ಹಳೆಯ ಕಾನೂನನ್ನು ರದ್ದುಗೊಳಿಸಿ ಆದೇಶಿಸಿದೆ.

ಹುಬ್ಬಳ್ಳಿಯ ಕೆಎಲ್‌ಇ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಎಂ ಪೀರಾಪುರ, ಕರ್ನಾಟಕ ಶುಶ್ರೂಷಕರ ಸಂಘ ಮತ್ತಿತರರು ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಸಂವಿಧಾನದ ಅಡಿಯಲ್ಲಿ ಮಹಿಳೆಯನ್ನು ಪ್ರತ್ಯೇಕ ವರ್ಗವೆಂದು ಹೇಳಿರುವುದು ನ್ಯಾಯಸಮ್ಮತವಾಗಿದೆ. ಆದರೆ, ಈ ಆಶಯವನ್ನು ಈಡೇರಿಸುವುದಕ್ಕಾಗಿ ತಾರ್ಕಿಕವಲ್ಲದ ರೀತಿಯಲ್ಲಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕು ಎಂದಾಗುವುದಿಲ್ಲ ಮತ್ತು ಪರಿಚ್ಛೇದ 15(3)(ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡುವ ಅವಕಾಶ)ರ ಅಡಿಯಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು1943ರಲ್ಲಿ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದರು. ಅದನ್ನು ಸಂವಿಧಾನದ ಅಡಿಯಲ್ಲಿ ಅಳವಡಿಸಿಕೊಂಡು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಆದರೆ, ಈ ಕಾನೂನು ಸಂವಿಧಾನದ 33ನೇ ಪರಿಚ್ಛೇದದಂತೆ ಸಂಸತ್ತು ಜಾರಿಗೆ ತಂದಿರುವ ಕಾನೂನನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸ್ವಾಂತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಸೇನೆಗೆ ಸೇರಲು ಹಿಂಜರಿಯುತ್ತಿದ್ದರು. ಆದ ಕಾರಣ ಮಹಿಳೆಯನ್ನು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, 1943ರಲ್ಲಿ ಇದ್ದಂತಹ ಪರಿಸ್ಥಿತಿ ಪ್ರಸ್ತುತ ಇಲ್ಲ. ಈ ಸುಗ್ರೀವಾಜ್ಞೆ ಜಾರಿಯಾಗಿ 8 ದಶಕಗಳು ಕಳೆದಿವೆ. ಆದರೂ ಇಂದಿಗೂ ಮೀಸಲಾತಿ ಒದಗಿಸುವ ಉದ್ದೇಶಗಳು ಏನು ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ್ದರಿಂದ ಈ ಮೀಸಲು ಸೌಲಭ್ಯ ಸಮರ್ಥನೆಗೆ ಅರ್ಹವಿಲ್ಲ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಆದಾಗ್ಯೂ, ಮೀಸಲಾತಿಯ ಪರಿಕಲ್ಪನೆಯು ವಂಚಿತರಿಗೆ ಸೌಲಭ್ಯವನ್ನು ಕಲ್ಪಿಸುವುದಾಗಿದೆಯೇ ವಿನಃ ಸೌಲಭ್ಯಗಳಿಂದ ವಂಚಿತರನ್ನಾಗಿಸುವುದಲ್ಲ. ಸಕಾರಣಗಳಿಲ್ಲದೆ ಶೇ.100ರಷ್ಟು ಮಹಿಳೆಯರಿಗೆ ಮಾತ್ರ ಅವಕಾಶ ನೀಡಿದಲ್ಲಿ ಮೀಸಲಾತಿ ಕಲ್ಪನೆ ಅಂತ್ಯಗೊಳಿಸಿದಂತಾಗುತ್ತದೆ. ಜತೆಗೆ, ಮೀಸಲು ಸೌಲಭ್ಯದಿಂದ ಪುರುಷರನ್ನು ಪ್ರತ್ಯೇಕಿಸಿದಂತಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅರ್ಜಿದಾರರನ್ನು ಸೇನೆಯ ಶುಶ್ರೂಷಕರನ್ನಾಗಿ ನೇಮಕ ಮಾಡಬೇಕು ಎಂದು ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.

ಏನಿದು ಪ್ರಕರಣ?

2010ರ ಫೆಬ್ರುವರಿ 13 ಮತ್ತು 19ರಂದು ಶುಶ್ರೂಷಕಿಯರ ನೇಮಕ ಸಂಬಂಧ ಭಾರತೀಯ ಮಿಲಟರಿ ಸೇನೆ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ಮಹಿಳೆಯರು ಮಾತ್ರ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ 1943ರ ಸೆಕ್ಷನ್ 6 ರಲ್ಲಿದ್ದ 'ಮಹಿಳೆಯಾಗಿದ್ದರೆ’ ಎಂಬ ಪದವನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ಕೋರಿದ್ದರು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಅಧಿಸೂಚನೆಗೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಗೆ ಮತ್ತು ಅರ್ಜಿದಾರರ ಸಂಘದಲ್ಲಿ ಇಬ್ಬರಿಗೆ ಈಗಾಗಲೇ ವಯೋಮಿತಿ ಮೀರಿದೆ ಎಂದು ವಾದ ಮಂಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT