ರಾಜ್ಯ

ಇಬ್ಬಲೂರು ಜಂಕ್ಷನ್‌ ಸಂಚಾರ ದಟ್ಟಣೆ: ಹೊಸ ಮಾರ್ಗದ ಮೂಲಕ ಸಮಸ್ಯೆ ದೂರಾಗಿಸಿದ ಪೊಲೀಸರು!

Manjula VN

ಬೆಂಗಳೂರು: ನಗರದ ದಕ್ಷಿಣ ಭಾಗದಿಂದ ಉತ್ತರ ಮತ್ತು ಪೂರ್ವ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ಇಬ್ಬಲೂರು ಜಂಕ್ಷನ್‌ನಲ್ಲಿ ಎದುರಾಗುತ್ತಿದ್ದ ಸಂಚಾರ ದಟ್ಟಣೆ ಸಮಸ್ಯೆಯನ್ನು ಪೊಲೀಸರು ದೂರಾಗಿಸಿದ್ದಾರೆ.

ಮೆಟ್ರೊ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ದೂರಾಗಿಸಲು ಸಂಚಾರ ಪೊಲೀಸರು ಪ್ರಾಯೋಗಿಕ ಪರಿಹಾರವನ್ನು ಕಂಡುಕೊಂಡಿದ್ದಾರೆ.

ಬೆಳ್ಳಂದೂರು ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್‌ವರೆಗೆ ಸಂಚಾರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಹೊಸ ಕ್ರಮದಿಂದ ದಟ್ಟಣೆ ಅವಧಿಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸುತ್ತಿವೆ.

ಹೊರವರ್ತುಲ ರಸ್ತೆಯ ಇಕೊಸ್ಪೇಸ್‌ ಕಡೆಯಿಂದ ದೇವರಬೀಸನಹಳ್ಳಿ ಜಂಕ್ಷನ್‌ ಕಡೆಗೆ ತೆರಳಲು, ಎಕೊಸ್ಪೇಸ್‌ ಜಂಕ್ಷನ್‌ನಿಂದ ದೇವರಬೀಸನಹಳ್ಳಿವರೆಗಿನ ಮೇಲ್ಸೇತುವೆ ಮಧ್ಯದ ರಸ್ತೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಸುಧಾರಣೆ ಕ್ರಮದಿಂದ ಎಕೊಸ್ಪೇಸ್‌, ಇಂಟೆಲ್‌, ಗ್ಲೋಬಲ್ ಟೆಕ್‌ ಪಾರ್ಕ್‌ ಸೇರಿದಂತೆ ಐ.ಟಿ ಪಾರ್ಕ್‌ಗಳಿಗೆ ವಾಹನಗಳು ತೆರಳಲು ಅನುಕೂಲವಾಗಿದೆ.

ಅಲ್ಲದೇ ಹೊರವರ್ತುಲ ರಸ್ತೆಯ ಬೆಳ್ಳಂದೂರು ಜಂಕ್ಷನ್‌ನಿಂದ ಎಕೊಸ್ಪೇಸ್ ಕಡೆಗೆ ವಾಹನಗಳು ತೆರಳಲು ಅನುಕೂಲ ಆಗುವಂತೆ, ಬೆಳ್ಳಂದೂರು ಜಂಕ್ಷನ್‌ನಿಂದ ಎಕೊಸ್ಪೇಸ್‌ವರೆಗಿನ ಮೇಲ್ಸೇತುವೆಯ ಮಧ್ಯದ ರಸ್ತೆಯನ್ನು ತೆರವು ಮಾಡಲಾಗಿದೆ. ಇದರಿಂದ ಮಾರತ್‌ಹಳ್ಳಿ ಸೇರಿದಂತೆ ವಿವಿಧ ಕಡೆಗೆ ವಾಹನಗಳು ಶೀಘ್ರವಾಗಿ ತೆರಳುವುದಕ್ಕೆ ಅವಕಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT