ರಾಜ್ಯ

ಮೇಕೆದಾಟು ಯೋಜನೆಗೆ ಅನುಮತಿ ನೀಡಿ: ಕೇಂದ್ರ ಸರ್ಕಾರಕ್ಕೆ ದೇವೇಗೌಡ ಮನವಿ

Manjula VN

ಬೆಂಗಳೂರು: ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ಒತ್ತಾಯಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ವಿವಿಧ ನೀರಾವರಿ ಯೋಜನಗಳಿಗೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವಾಲಯದ ಸ್ಥಾಯಿ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ದೇವೇಗೌಡ ಅವರೂ ಕೂಡ ಭಾಗಿಯಾಗಿದ್ದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಒಪ್ಪಿಗೆ ನೀಡುವಂತೆ ಸಭೆಯಲ್ಲಿ ತಿಳಿಸಲಾಗಿದೆ. ತಮಿಳುನಾಡು ಸರ್ಕಾರ ಎಲ್ಲದಕ್ಕೂ ತಕರಾರು ತೆಗೆಯುತ್ತಿದೆ. ನಮ್ಮ ಹಣದಲ್ಲಿ ನಾವು ಅಣೆಕಟ್ಟು ನಿರ್ಮಾಣ ಮಾಡುತ್ತೇವೆ. ಸ್ವಾಮಿನಾಥನ್ ಅವರೇ ವರದಿ ನೀಡಿದ್ದು, ಮೂರು ಬಾರಿ ಬೆಳೆ ಬರಲಿದೆ ಎಂದು ಹೇಳಿದರೂ ಕ್ಯಾತೆ ತೆಗೆಯುತ್ತಿದೆ ಎಂದು ಹೇಳಿದರು.

ವಿವಿಧ ನೀರಾವರಿ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆ ಚರ್ಚೆಯಾಗಿದೆ. ತಮಿಳುನಾಡು ಎಲ್ಲಾ ಜಿಲ್ಲೆಗಳ ಎಲ್ಲ ಗ್ರಾಮಗಳಿಗೆ ನೀರು ಕೊಡುತ್ತಿದ್ದು, ಹೊಗೇನಕಲ್‌ನಿಂದ ಎಲ್ಲಾ ಕಡೆ ನೀರು ನೀಡಲಾಗಿದೆ. ನಮ್ಮ ತಪ್ಪೇನಿದೆ? ನಾವು ಕುಡಿಯುವ ನೀರು ಕೇಳುತ್ತಿದ್ದೇವೆ. ಅದನ್ನೇ ನಾವು ಅವರಿಗೂ ತಿಳಿಸಿದ್ದೇವೆ. ಎಲ್ಲಾ ಯೋಜನೆಗಳಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತದೆ. ಆದರೂ ನಮಗೆ ಕುಡಿಯುವ ನೀರಿಗೆ ಅಡ್ಡಿ ಮಾಡಲಾಗುತ್ತಿದೆ. ಈ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸುತ್ತೇನೆಂದು ತಿಳಿಸಿದ್ದಾರೆ.

ಸಭೆಯಲ್ಲಿ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ. ರಾಜ್ಯ ಬಳಿ ಹಣ ಇಲ್ಲ ಎಂದೂ ತಿಳಿಸಲಾಗಿದೆ. ರಾಜ್ಯಕ್ಕೆ ನೀರಾವರಿ ಯೋಜನೆಗಳಿಂದ ಅನ್ಯಾಯವಾಗುತ್ತಿರುವ ಬಗ್ಗೆ ಗಮನಕ್ಕೆ ತಂದು ಸರಿಪಡಿಸುವಂತೆ ತಿಳಿಸಲಾಗಿದೆ ಎಂದು ಎಂದರು.

ಕಾವೇರಿ ಕೊಳ್ಳದ ಭಾಗದಲ್ಲಿ ಏತ ನೀರಾವತಿ ಮೂಲಕ ನೀರು ಬಳಸಿಕೊಳ್ಳುವ ವಿಚಾರವಾಗಿ ಚರ್ಚಿಸಲಾಗಿದೆ. ಸಂಸದ ಡಿಕೆ.ಸುರೇಶ್ ಅವರ ಕೂಡ ಕಳೆದ ಬಾರಿ ನಡೆದ ಸಭೆಯಲ್ಲಿ ನೀರಾವರಿ ಬಗ್ಗೆ ಮಾತನಾಡಿದ್ದಾರೆ. ಅವರ ಬಗ್ಗೆಯೂ ನನಗೆ ಗೌರವ ಇದೆ. ಸದ್ಯಕ್ಕೆ ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿರಬೇಕು. ನಾವಂತೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಸಭೆಗೆ ಬಂದಿದ್ದೇವೆ. ನೀರಿವ ವಿಚಾರದಲ್ಲಿ ನಮ್ಮೆಲ್ಲರ ಅಭಿಪ್ರಾಯ ಒಂದೇ ಆಗಿದೆ ಎಂದರು.

SCROLL FOR NEXT