ಚಿತ್ರದುರ್ಗ: ಇಲ್ಲಿನ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಮೃತದೇಹ ಸಾಗಿಸುತ್ತಿದ್ದ ಕಾರಿನ ಟೈರ್ ಸ್ಫೋಟಕೊಂಡು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿಂದ ಬಳ್ಳಾರಿಯ ಸಿರಗುಪ್ಪಕ್ಕೆ ಮೃತ ಮಹಿಳೆಯ ಶವವನ್ನು ಕೊಂಡೊಯ್ಯುವಾಗ ರಾಂಪುರ ಗ್ರಾಮ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಮೃತರನ್ನು 40 ವರ್ಷದ ಸುರೇಶ್, 25 ವರ್ಷದ ಮಲ್ಲಿಕಾರ್ಜುನ ಮತ್ತು 9 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ಮೃತರು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ದೇಸನೂರು ನಿವಾಸಿಗಳು ಎಂದು ತಿಳಿದುಬಂದಿದೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ 66 ವರ್ಷದ ಹುಲಿಗೆಮ್ಮ ಎಂಬುವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಹೀಗಾಗಿ ಕಾರಿನಲ್ಲಿ ಹುಲಿಗೆಮ್ಮನ ಮೃತದೇಹವನ್ನು ಬೆಂಗಳೂರಿನಿಂದ ದೇಸನೂರಿಗೆ ಸಾಗಿಸಲಾಗುತ್ತಿತ್ತು. ಅಪಘಾತದಲ್ಲಿ ನಾಗಮ್ಮ, ತಾಯಮ್ಮ, ಧನರಾಜ್ ಗಾಯಗೊಂಡಿದ್ದು ಕಾರು ಚಾಲಕ ಶಿವು ಸ್ಥಿತಿ ಗಂಭೀರವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.