ರಾಜ್ಯ

ಮೇಲುಕೋಟೆ: ದೇವಸ್ಥಾನ ಹಿಂಭಾಗ ಖಾಸಗಿ ಶಾಲೆ ಶಿಕ್ಷಕಿ ಶವ ಪತ್ತೆ

Sumana Upadhyaya

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲದಲ್ಲಿ ಹೂತಿಟ್ಟಿದ್ದ 28 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯ ಶವ ನಿನ್ನೆ ಸೋಮವಾರ ಪೊಲೀಸರಿಗೆ ಪತ್ತೆಯಾಗಿದೆ. 

ಮೇಲುಕೋಟೆಯ ಮಾಣಿಕ್ಯನಹಳ್ಳಿ ಗ್ರಾಮದ ನಿವಾಸಿ ಹಾಗೂ ದೇವಸ್ಥಾನ ಪೇಟೆಯ ಎಸ್‌ಇಟಿ ಪಬ್ಲಿಕ್ ಸ್ಕೂಲ್‌ನಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಿಕಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶಿಕ್ಷಕಿ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದು, ದಂಪತಿಗೆ ಎಂಟು ತಿಂಗಳ ಮಗುವಿದೆ. ಪ್ರತಿನಿತ್ಯ ದೀಪಿಕಾ ತನ್ನ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದರು. ಜನವರಿ 20ರಂದು ಕರ್ತವ್ಯ ಮುಗಿಸಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆ ಬಿಟ್ಟಿದ್ದರು. 

ಗಸ್ತಿನಲ್ಲಿದ್ದ ಮೇಲುಕೋಟೆ ಪೊಲೀಸರು ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಹಿಂದೆ ಸ್ಕೂಟರ್ ನಿಲ್ಲಿಸಿರುವುದು ಕಂಡು ಅನುಮಾನಗೊಂಡು ಸುತ್ತಮುತ್ತಲಿನ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ವಾಹನದ ಮಾಲೀಕರ ಪತ್ತೆಗೆ ಯತ್ನಿಸಿದ್ದಾರೆ.

ವಾಹನದ ನೋಂದಣಿ ಸಂಖ್ಯೆ ಆಧರಿಸಿ ಯಾರೂ ಸಿಗದಿದ್ದಾಗ ಪೊಲೀಸರು ಶಿಕ್ಷಕನ ತಂದೆ ವೆಂಕಟೇಶ್ ಅವರನ್ನು ಸಂಪರ್ಕಿಸಿದರು. ವಾಹನವು ತನ್ನ ಮಗಳದ್ದು ಎಂದು ವೆಂಕಟೇಶ್ ಖಚಿತಪಡಿಸಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ ನಂತರ, ಪೊಲೀಸರು ಮಹಿಳೆಯ ಪತ್ತೆಗಾಗಿ ಹುಡುಕಾಟವನ್ನು ತೀವ್ರಗೊಳಿಸಿದರು.

ನಿನ್ನೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಲವು ಭಕ್ತರು ಮಹಿಳೆಯ ಶವವನ್ನು ನೆಲದಲ್ಲಿ ಹೂತು ಹಾಕಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

SCROLL FOR NEXT