ದೇಶಾದ್ಯಂತ ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ಬಂದಿವೆ. ಹೊಸ ಕಾಯ್ದೆಗಳ ಜಾರಿ ಬಗ್ಗೆ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನುಗಳು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಹೊಸ ಕಾನೂನುಗಳ ಬಗ್ಗೆ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಪೊಲೀಸರಿಗಾಗಿ ಹೊಸದಾಗಿ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಸ ಕಾನೂನುಗಳ ಪ್ರಕಾರ ಕೆಲಸ ಮಾಡುವುದು ಹೊಂದಿಕೆಯಾಗುವವರೆಗೂ ಆ್ಯಪ್ ನೋಡಿಕೊಂಡು ಕೆಲಸ ಮಾಡಲು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ. ಇಂದಿನಿಂದ ಎಲ್ಲಾ ಹೊಸ ಎಫ್‌ಐಆರ್‌ಗಳನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ದಾಖಲಿಸಲಾಗುತ್ತದೆ. ಆದಾಗ್ಯೂ, ಈ ಹಿಂದೆ ದಾಖಲಾದ ಪ್ರಕರಣಗಳು ಅಂತಿಮ ವಿಲೇವಾರಿಯಾಗುವವರೆಗೆ ಹಳೆಯ ಕಾನೂನುಗಳ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ.
ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ ಹಾಗೂ ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇಂದು ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ, ಸುಳ್ಳು ಸುದ್ದಿಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು, ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು, ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು, ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನು ಪೊಲೀಸ್ ಕಾನ್‌ಸ್ಟೆಬಲ್ ಓರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ವರದಿಯಾಗಿದೆ. ಹಾಸನ ನಗರ ಠಾಣೆಯ ಕಾನ್‌ಸ್ಟೆಬಲ್ ಲೋಕನಾಥ್ ತಮ್ಮ ಪತ್ನಿ ಮಮತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಲೋಕನಾಥ್ ಮತ್ತು ಮಮತಾ ಮಧ್ಯೆ 4-5 ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಪತ್ನಿ ಮಮತಾ ಬಂದಿದ್ದಾರೆ. ಈ ವೇಳೆ ಆವರಣದಲ್ಲೇ ಮಮತಾಗೆ ಚೂರಿಯಿಂದ ಇರಿದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆ ಬದುಕಿ ಉಳಿಯಲಿಲ್ಲ. ಹತ್ಯೆ ಮಾಡಿದ ನಂತರ ಪರಾರಿಯಾಗಿದ್ದ ಲೋಕನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ, ಕನ್ನಡ ಚಿತ್ರರಂಗದ ನಟರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು-ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ನಾರಾಯಣಗೌಡ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಹಾಗೂ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿದ್ದೇವೆ. ಒಂದು ವೇಳೆ ಅನುಷ್ಠಾನಗೊಳಿಸಲು ವಿಫಲವಾದರೆ ನಮ್ಮ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲಿದೆ ಎಂದು ಎಚ್ಚರಿಸಿದರು. ಅಂತೆಯೇ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿಎಂ ಬದಲಾವಣೆ ವಿಷಯವಾಗಿ ಪರ-ವಿರೋಧದ ಹೇಳಿಕೆಗಳ ನಡುವೆ ಸಿಎಂ ಈ ಪ್ರತಿಕ್ರಿಯೆ ನೀಡಿರುವುದು ಕುತೂಹಲ ಮೂಡಿಸಿದೆ. ಕಳೆದ ವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಸ್ವಾಮೀಜಿಯೊಬ್ಬರು ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಈಗ ಮತ್ತೊಮ್ಮೆ ಈ ವಿಷಯವಾಗಿ ಬಂದಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಸಿಎಂ ಬದಲಾವಣೆ ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರೂ ಬದ್ಧವಾಗಿರುತ್ತೇನೆ ಎಂದು ಹೇಳಿದ್ದಾರೆ.