ಬೆಂಗಳೂರು: ವಿವಿಧ ಚಟುವಟಿಕೆಗಳ ಮೂಲಕ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಎತ್ತಿ ಹಿಡಿಯಲು ಮಕ್ಕಳು, ಯುವಕರು ಮತ್ತು ಹಿರಿಯರಿಗೆ ಸಹಾಯ ಮಾಡುವ ಬೆಂಗಳೂರಿನ ಸಮಷ್ಠಿ ಗುಬ್ಬಿ ಅವರ ವೀಕೆಂಡ್ ಸಂಸ್ಕೃತ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಭಾನುವಾರ ಮಾತನಾಡಿದ ಮೋದಿಯವರು. ಕಬ್ಬನ್ಪಾರ್ಕ್ ನಲ್ಲಿ ವಾರಾಂತ್ಯದ ವೇಳೆ ನಡೆಯುವ ಸಂಸ್ಕೃತ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಚೀನ ಭಾರತೀಯ ಜ್ಞಾನ ಮತ್ತು ವಿಜ್ಞಾನದ ಪ್ರಕ್ರಿಯೆಯಲ್ಲಿ ಸಂಸ್ಕೃತವು ದೊಡ್ಡ ಪಾತ್ರವನ್ನು ವಹಿಸಿದೆ. ಇಂದು ನಾವು ಸಂಸ್ಕೃತಕ್ಕೆ ಸರಿಯಾದ ಗೌರವವನ್ನು ನೀಡಬೇಕು ಮತ್ತು ಅದನ್ನು ನಮ್ಮ ದೈನಂದಿನ ಜೀವನದೊಂದಿಗೆ ಅಳವಡಿಸಿಕೊಳ್ಳಬೇಕು. ಪ್ರತಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಸೇರುವ ಜನರು ಸಂಸ್ಕೃತಿದಲ್ಲಿಯೇ ಮಾತನಾಡುತ್ತಾರೆ. ಹಿರಿಯರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯಲ್ಲಿಯೇ ಚರ್ಚೆ ನಡೆಸುತ್ತಾರೆ. ನಮ್ಮ ಭಾಷೆ ಉಳಿಸುವ ನಿಟ್ಟಿನಲ್ಲಿ ಇದು ದೊಡ್ಡಮಟ್ಟದ ಕೆಲಸವಾಗಿದೆ. ಜನರು ಸ್ವಯಂ ಪ್ರೇರಿತವಾಗಿ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯನ್ನು ಆನಂದಿಸುತ್ತಾರೆಂದು ಹೇಳಿದರು.
ಈ ಕಾರ್ಯಕ್ರಮವನ್ನು ಸಮಷ್ಟಿ ಗುಬ್ಬಿ ಜಿಯವರು ವೆಬ್‌ಸೈಟ್ ಮೂಲಕ ಪ್ರಾರಂಭಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆರಂಭವಾದ ಈ ಪ್ರಯತ್ನ ಬೆಂಗಳೂರಿನ ಜನರಲ್ಲಿ ಬಹುಬೇಗ ಜನಪ್ರಿಯವಾಗಿದೆ.
ನಾವೆಲ್ಲರೂ ಇಂತಹ ಪ್ರಯತ್ನಕ್ಕೆ ಕೈಜೋಡಿಸಿದರೆ, ಪ್ರಪಂಚದ ಇಂತಹ ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಿಂದ ನಾವು ಬಹಳಷ್ಟು ಕಲಿಯಬಹುದು ಎಂದು ಶ್ಲಾಘಿಸಿದ್ದಾರೆ. ಇಲ್ಲಿ ಸಂಸ್ಕೃತದಲ್ಲಿಯೇ ಹಲವು ಚರ್ಚಾ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ.
ಮೋದಿಯವರು ತಮ್ಮ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಮಷ್ಠಿ ಅವರು, ಪ್ರಧಾನ ಮಂತ್ರಿಯವರು ನಮ್ಮ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಈ ಬೆಂಬಲ ಸಾಕಷ್ಟು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಸಂಸ್ಕೃತವು ತರಗತಿಗಳಿಗೆ ಅಥವಾ ದೇವಾಲಯಗಳಿಗೆ ಸೀಮಿತವಾಗಬಾರದು. ನಾವು ಅದನ್ನು ನಮ್ಮ ದೈನಂದಿನ ಜೀವನದಲ್ಲಿ ಬಳಸಬಹುದು. ಎಲ್ಲಾ ಸಮುದಾಯದ ಜನರು ಭಾನುವಾರ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಅದನ್ನು ನಾವು ಪ್ರೋತ್ಸಾಹಿಸುತ್ತೇವೆಂದು ತಿಳಿಸಿದ್ದಾರೆ.