ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೂ, ಬೀದಿ ವ್ಯಾಪಾರಿಗಳು ಪ್ಲಾಸ್ಟಿಕ್ ಚೀಲ ಬಳಸುತ್ತಿದ್ದರೆ ದಂಡ ವಿಧಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಪೂರ್ವ ವಲಯ ಹೆಬ್ಬಾಳ ವಿಭಾಗದ ಮುನಿರೆಡ್ಡಿ ಪಾಳ್ಯ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬಟ್ಟೆ ಚೀಲ ಅಥವಾ ಪೇಪರ್ ಚೀಲಗಳನ್ನು ಮಾತ್ರ ಬಳಸಲು ನಾಗರೀಕರು ಹಾಗೂ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೀದಿ ಬದಿ ವ್ಯಾಪಾರಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟ ಮಾಡುವವರಿಗೆ ಯಾವ್ಯಾವ ಪ್ಲಾಸ್ಟಿಕ್ ನಿಷೇಧವಾಗಿದೆ, ಯಾವುದನ್ನು ಬಳಸಲು ಅನುಮತಿಯಿದೆ ಎಂಬುದರ ಭಿತ್ತಿಪತ್ರಗಳನ್ನು ನೀಡಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಾಗೃತಿ ಜಾಥಾ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳ ಬಳಿ ತೆರಳಿ ಬಿತ್ತಿಪತ್ರಗಳನ್ನು ವಿತರಿಸುವ ಜೊತೆಗೆ ಬಟ್ಟೆ ಚೀಲಗಳನ್ನು ವಿತರಿಸಿ ಇನ್ನು ಮುಂದೆ ಪ್ಲಾಸ್ಟಿಕ್ ಚೀಲಗಳನ್ನು ಬಳಸದೆ ಇದೇ ರೀತಿಯ ಬಟ್ಟೆ ಚೀಲಗಳನ್ನು ಮಾತ್ರ ಬಳಸಬೇಕು. ಯಾವದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದೆಂದು ಮನವಿ ಮಾಡಿದರು. ಎಳನೀರು ಮಾರಾಟ ಮಾಡುವವರಿಗೆ ಪೇಪರ್ ಸ್ಟ್ರಾ ವಿತರಣೆ ಮಾಡಿ ಪ್ಲಾಸ್ಟಿಕ್ ನಿಂದ ತಯಾರಿಸಿದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಬಳಸದಂತೆ ಮನವಿ ಮಾಡಿದರು.
ಇದೇ ವೇಳೆ ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸಲು ಮನವಿ ಮಾಡಿದರು.