ಮಡಿಕೇರಿ: ‘ಬಾಣೆ’ ಜಮೀನುಗಳನ್ನು ಕಂದಾಯ ಇಲಾಖೆಗೆ ಒಳಪಡಿಸಬೇಕೆಂಬುದು ಕೊಡಗಿನ ರೈತರ ಬಹುಮುಖ್ಯ ಬೇಡಿಕೆಯಾಗಿದೆ. ‘ಬಾಣೆ’ ಜಮೀನಿನ ಸರ್ವೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದರೂ ಜಿಲ್ಲೆಯಲ್ಲಿ ಭೂ ದಾಖಲೆ ಮತ್ತು ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ನೂರಾರು ರೈತರು ಹಾಗೂ ಇತರೆ ನಿವಾಸಿಗಳಿಗೆ ಸಮಯಕ್ಕೆ ಸರಿಯಾಗಿ ಕೆಲಸವಾಗದೆ ತೊಂದರೆಯಾಗಿದೆ.
ಜಿಲ್ಲಾ ಭೂದಾಖಲೆಗಳು ಮತ್ತು ಸರ್ವೆ ಇಲಾಖೆಗೆ ಕ್ಲರ್ಕ್ ಹುದ್ದೆಗಳು ಸೇರಿದಂತೆ ಒಟ್ಟು 101 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಆದರೆ, ಇಲಾಖೆಯಲ್ಲಿ ಒಟ್ಟು 59 ಹುದ್ದೆಗಳು ಖಾಲಿ ಬಿದ್ದಿದ್ದು, ಇಲಾಖೆ ಕಾರ್ಯವೈಖರಿಗೆ ತೀವ್ರ ಸಮಸ್ಯೆಯಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕುಶಾಲನಗರ, ಪೊನ್ನಂಪೇಟೆ ತಾಲೂಕು ಸೇರಿದಂತೆ ಐದು ತಾಲೂಕುಗಳಿದ್ದರೂ ಹೊಸ ತಾಲೂಕುಗಳಿಗೆ ಇಲಾಖೆಗೆ ಯಾವುದೇ ಹುದ್ದೆ ಮಂಜೂರಾಗಿಲ್ಲ. ಶೇಕಡಾ 50ಕ್ಕೂ ಅಧಿಕ ಸಿಬ್ಬಂದಿ ಕೊರತೆಯ ನಡುವೆ ಈಗಿರುವ ಅಧಿಕಾರಿಗಳನ್ನು ಹೊಸ ತಾಲೂಕುಗಳಿಗೆ ಪ್ರಭಾರಿ ಸರ್ವೇ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಮೂಲಗಳ ಪ್ರಕಾರ ವಿರಾಜಪೇಟೆ ತಾಲೂಕಿನಲ್ಲಿ ಭೂಮಾಪನ ಮತ್ತು ಅಳತೆಗೆ ಸಂಬಂಧಿಸಿದ 700ಕ್ಕೂ ಅಧಿಕ ಕಡತಗಳು ಸರ್ವೆ ಅಧಿಕಾರಿಗಳ ಅಲಭ್ಯತೆಯಿಂದಾಗಿ ಹಲವು ತಿಂಗಳುಗಳಿಂದ ಬಾಕಿ ಉಳಿದಿವೆ. ಪೊನ್ನಂಪೇಟೆ ತಾಲೂಕಿನಲ್ಲಿ ಪ್ರತಿದಿನ ಹೊಸ ಅರ್ಜಿಗಳು ಹರಿದು ಬರುತ್ತಿದ್ದರೂ ಒಟ್ಟು 831 ಭೂಮಾಪನ ಕಡತಗಳು ಬಾಕಿ ಉಳಿದಿವೆ.
ರಾಜ್ಯ ಸರ್ಕಾರ ಹೊಸ ತಾಲೂಕುಗಳಿಗೆ ಯಾವುದೇ ಹುದ್ದೆ ಕಲ್ಪಿಸಿಲ್ಲ. ಸಿಬ್ಬಂದಿ ಕೊರತೆಯ ನಡುವೆ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಗೆ ಮಡಿಕೇರಿ ಕೇಂದ್ರ ಕಚೇರಿ ಹಾಗೂ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಮೂರು ತಾಲೂಕುಗಳಿಗೆ ಒಟ್ಟು 50 ಸರ್ವೇಯರ್‌ಗಳ ಹುದ್ದೆ ಮಂಜೂರಾಗಿದೆ. ಆದರೆ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಸರ್ವೇಯರ್‌ಗಳು ಕ್ರಮವಾಗಿ ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕಿಗೆ ಪ್ರಭಾರಿ ಸರ್ವೆಯರ್‌ಗಳಾಗಿ ಭೇಟಿ ನೀಡಬೇಕಾಗಿದ್ದರೂ ಮೂರು ತಾಲೂಕುಗಳಲ್ಲಿ 11 ಭೂಮಾಪಕರ ಹುದ್ದೆಗಳು ಖಾಲಿ ಇವೆ. ವಿರಾಜಪೇಟೆ ತಾಲೂಕಿನ ಸಂಬಂಧಪಟ್ಟ ಎಡಿಎಲ್‌ಆರ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಡಿಡಿಎಲ್‌ಆರ್‌ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಡಿಡಿಎಲ್ ಆರ್ ನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅಧಿಕಾರಿಯು ದೀರ್ಘಾವಧಿಯ ರಜೆಯಲ್ಲಿದ್ದಾರೆ ಎಂದರು. ಫೋನ್ ನಲ್ಲಿ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.