ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪೋಕ್ಸೊ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿಎಸ್ ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳಿಗೆ ನಗರದ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಈ ಕುರಿತ ಅರ್ಜಿಯನ್ನು ನಗರದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್.ಎಂ.ರಮೇಶ್ ಗುರುವಾರ ವಿಚಾರಣೆ ನಡೆಸಿ ಸಮನ್ಸ್ ಜಾರಿಗೊಳಿಸಲು ಆದೇಶಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯನ್ನು ಪರಿಗಣಿಸಿದ ನ್ಯಾಯಾಲಯ, ಬಿ.ಎಸ್.ಯಡಿಯೂರಪ್ಪ, ಅವರ ಸಹಚರರಾದ ವೈ.ಎಂ.ಅರುಣ್, ಎಂ.ರುದ್ರೇಶ್ ಮತ್ತು ವೈ.ಮರಿಸ್ವಾಮಿ ಅವರು ಜು.15 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿದೆ.
ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್ 354 (ಎ) ಅಡಿ (ಲೈಂಗಿಕ ಕಿರುಕುಳ) ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ ಬಾಲಕಿಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಆಕೆಯ ಬಲಭಾಗದ ಸ್ತನವನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಳು. ಆನಂತರ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ನನ್ನ ಪುತ್ರಿ ಘಟನೆಯನ್ನು ವಿವರಿಸಿದಳು ಎಂದು ದೂರಲಾಗಿತ್ತು.
ಈ ಕುರಿತು ಯಡಿಯೂರಪ್ಪ ಅವರನ್ನು ಪ್ರಶ್ನಿಸಲಾಗಿ ಅದಕ್ಕೆ ಅವರು ನಿಮ್ಮ ಮಗಳಿಗೆ ರೇಪ್ ಆಗಿದೆಯೋ? ಇಲ್ಲವೋ? ಎಂಬುದನ್ನು ಚೆಕ್ ಮಾಡಲು ಹಾಗೆ ಮಾಡಿದೆ ಎಂದರು. ತಕ್ಷಣ ನಮ್ಮ ಕ್ಷಮೆಯಾಚಿಸಿದ ಯಡಿಯೂರಪ್ಪ ಅವರು ನಿಮಗೆ ಮೋಸ ಆಗಿರುವ ಬಗ್ಗೆ ಸಹಾಯ ಮಾಡುತ್ತೇನೆ ಎಂದರು. ಇದಕ್ಕೆ ನಾನು ಒಪ್ಪಲಿಲ್ಲ. ಅದಾಗ್ಯೂ, ಯಡಿಯೂರಪ್ಪ ಅವರು ಈ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು.
ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.