ಬೆಂಗಳೂರು: ರಾಮನಗರ ಜಿಲ್ಲೆ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಕುಡಿಯುವ ನೀರು ಒದಗಿಸುವ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಉಸ್ತುವಾರಿಗೆ ರಚಿಸಿರುವ ತಾಂತ್ರಿಕ ಸಮಿತಿ ಜುಲೈ 9ರಂದು ಮೊದಲ ಸಭೆ ನಡೆಸಲಿದೆ.
ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಕಾವೇರಿ ನೀರಾವರಿ ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ನೀರಾವರಿ ಇಲಾಖೆ ಪ್ರಕಟಣೆ ತಿಳಿಸಿದೆ. ನಿವೃತ್ತ ಮುಖ್ಯ ಇಂಜಿನಿಯರ್ ಅರವಿಂದ ಡಿ ಕಣಗಿಲೆ ನೇತೃತ್ವದ ತಾಂತ್ರಿಕ ಸಮಿತಿಯಲ್ಲಿ ಅಧೀಕ್ಷಕ ಅಭಿಯಂತರ ಬಿ ಸುವರ್ಣ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ನಿವೃತ್ತ ಪ್ರಧಾನ ಎಂಜಿನಿಯರ್ ಕೆ.ಬಾಲಕೃಷ್ಣ, ನಿವೃತ್ತ ಮುಖ್ಯ ಎಂಜಿನಿಯರ್ ಶಂಕರೇಗೌಡ, ಎಂ.ಜಿ.ಶಿವಕುಮಾರ್ ಸಮಿತಿಯ ಸದಸ್ಯರಾಗಿದ್ದಾರೆ. ನದಿ ಜೋಡಣೆ ಕಾಲುವೆಯಿಂದ ಪೈಪ್ ಲೈನ್ ಮೂಲಕ ಕೆರೆ ತುಂಬಿಸಲು ಜುಲೈ 3ರಂದು ಸಮಿತಿ ರಚಿಸಲಾಗಿತ್ತು. ಒಂದು ತಿಂಗಳಲ್ಲಿ ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಸಬೇಕಿದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.