ಬೆಂಗಳೂರು: ಬೆಂಗಳೂರಿನ ಆಟೋ-ಹೇಲಿಂಗ್ ಅಪ್ಲಿಕೇಶನ್ 'ನಮ್ಮ ಯಾತ್ರಿ' ಆರಂಭಿಸಿದ ಮಹಿಳಾ ಶಕ್ತಿ ಉಪಕ್ರಮವು ಮಹಿಳಾ ಆಟೋ ಚಾಲಕರಿಗೆ ಈ ವರೆಗೂ ರೂ.42 ಲಕ್ಷ ಆದಾಯ ತಂದುಕೊಟ್ಟಿದೆ.
ಈ ಉಪಕ್ರಮವು ಮಹಿಳಾ ಚಾಲಕರಿಗೆ ಆರ್ಥಿಕ ಸ್ವಾತಂತ್ರ್ಯ, ಗೌರವ ಸಾಧಿಸಲು ನೆರವಾಗುತ್ತಿದ್ದು, ಆ್ಯಪ್ ಮೂಲಕ ಮಹಿಳೆಯರು ಈ ವರೆಗೂ 4 ಲಕ್ಷ ಕಿ.ಮೀ ಚಾಲನೆ ಮಾಡಿದ್ದಾರೆ.
ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಮಹಿಳಾ ಚಾಲಕರನ್ನು ಗುರ್ತಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಆಟೋ ಡ್ರೈವರ್‌ಗಳಾಗುವ ಮೂಲಕ, ಈ ಮಹಿಳೆಯರು ಜೀವನೋಪಾಯವನ್ನು ಗಳಿಸುವುದಲ್ಲದೆ, ಸಾಮಾಜಿಕ ನಿಯಮಗಳನ್ನು ಮರುರೂಪಿಸುತ್ತಿದ್ದಾರೆ. ನಮ್ಮ ರಸ್ತೆಗಳಲ್ಲಿ ಅವರ ಉಪಸ್ಥಿತಿಯು ನಗರ ಚಲನಶೀಲತೆಗೆ ಹೊಸ ಆಯಾಮವನ್ನು ನೀಡುತ್ತದೆ. ಎಲ್ಲರಿಗೂ ಸುರಕ್ಷಿತ ಮತ್ತು ಹೆಚ್ಚು ಸ್ವಾಗತಾರ್ಹ ವಾತಾವರಣವನ್ನು ಉತ್ತೇಜಿಸುತ್ತದೆ. ಈ ಉಪಕ್ರಮವು ನಮ್ಮ ಮಹಿಳೆಯರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ. ಸಬಲೀಕರಣದತ್ತ ಅವರ ಪ್ರಯಾಣವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮಹಿಳಾ ಚಾಲಕರಿಗೆ ಉಚಿತ ತರಬೇತಿ ಕಾರ್ಯಕ್ರಮಗಳು, ಪರವಾನಗಿಗಳನ್ನು ನೀಡಲು ನೆರವು ಮತ್ತು ಸಾಲವನ್ನು ಪಡೆಯಲು ಹಣಕಾಸಿನ ನೆರವು ಸೇರಿದಂತೆ ವಿವಿಧ ರೀತಿಯ ಬೆಂಬಲ ನೀಡುವುದಾಗಿಯೂ ಸಚಿವರು ಭರವಸೆ ನೀಡಿದರು.
ಮಹಿಳಾ ಶಕ್ತಿ' ಉಪಕ್ರಮದಡಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರೋಗ್ರಾಂ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್, ಟ್ರಾಫಿಕ್ ನಿಯಮಗಳು, ಅಪ್ಲಿಕೇಶನ್ ಬಳಕೆ ಮತ್ತು ಗ್ರಾಹಕ ಸೇವಾ ಕೌಶಲ್ಯಗಳ ಕುರಿತು ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು ನಮ್ಮ ಯಾತ್ರಿ ನಂಬರ್ 080-6972 4800 ಅಥವಾ WhatsApp ಮೂಲಕ 86189 63188 ಗೆ ಸಂಪರ್ಕಿಸಬಹುದು.