ಮೈಸೂರು: Mysuru Urban Development Authority (MUDA) ಹಗರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸಲ್ಲಿಸಿ ಸೈಟ್ ಪಡೆದ ಆರೋಪದ ಮೇರೆಗೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಹೌದು.. ದಿನ ಕಳೆದಂತೆ ಮುಡಾ ಹಗರಣದಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿದ್ದು, ಇದೀಗ ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮುಡಾಗೆ ವಂಚನೆ ಮಾಡಲಾಗಿದೆ ಎಂಬ ದೂರು ದಾಖಲಾಗಿದೆ. ನಕಲಿ ದಾಖಲೆ ಸಲ್ಲಿಸಿ ಸೈಟ್ ಪಡೆದ ಆರೋಪದ ಮೇರೆಗೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ದೇವರಾಜು ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನೋಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳ ಶಾಮೀಲು ಬಗ್ಗೆಯು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರರು ದೂರು ದಾಖಲಿಸಿದ್ದು, ಪೊಲೀಸರ ಜೊತೆಗೆ ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಅವರು ಪತ್ರ ಬರೆದಿದ್ದಾರೆ.
ದೂರಿನಲ್ಲಿ ದೂರುದಾರರು ಹಲವು ಪ್ರಶ್ನೆಗಳನ್ನು ಎತ್ತಿದ್ದು, ಪಾರ್ವತಿ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ರಾಜ್ಯಪತ್ರದ ಬಗ್ಗೆಯೇ ಅನುಮಾನ ಇದೆ. ಮೂಲ ಭೂ ಮಾಲೀಕರ ಮಗ ಎನ್ನುವ ಮಲ್ಲಿಕಾರ್ಜುನಸ್ವಾಮಿ ದೇವರಾಜು ಅಸ್ತಿತ್ವದ ಬಗ್ಗೆ ಪ್ರಶ್ನೆ ಎತ್ತಲಾಗಿದೆ. 1998ರಲ್ಲಿ ಭೂ ಸ್ವಾಧಿನದಿಂದ ಕೈ ಬಿಟ್ಟಿದ್ದು ನಿಜವಾದರೆ 2010ರ ವರೆಗಿನ ಆರ್ಟಿಸಿ ಗಳಲ್ಲಿ ಭೂ ಸ್ವಾಧೀನ ಎಂಬ ಉಲ್ಲೇಖ ಏಕಿದೆ ಎಂದು ಪ್ರಶ್ನಿಸಿದ್ದಾರೆ.
1998ರಲ್ಲಿ ಭೂ ಸ್ವಾಧಿನದಿಂದ ಕೈ ಬಿಟ್ಟಿದ್ದು ನಿಜವಾದರೆ 2010ರ ವರೆಗಿನ ಆರ್ಟಿಸಿ ಗಳಲ್ಲಿ ಭೂ ಸ್ವಾಧೀನ ಎಂಬ ಉಲ್ಲೇಖ ಏಕಿದೆ. ನಂತರ ಮಲ್ಲಿಕಾರ್ಜುನಸ್ವಾಮಿ ದೇವರಾಜು ಅವರ ಮಾಲೀಕತ್ವ ಮತ್ತು ಸ್ವಾಧೀನದಲ್ಲಿ ಈ ಜಮೀನು ಇದ್ದಿದ್ದರೆ ಪ್ರಾಧಿಕಾರದ ಅಭಿವೃದ್ಧಿ ಕೆಲಸವನ್ನ ಏಕೆ ತಡೆದಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮಾತ್ರವಲ್ಲದೇ ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪ ನೋಂದಣಾಧಿಕಾರಿ ಮತ್ತು ಮುಡಾ ಅಧಿಕಾರಿಗಳು ಕೂಡ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.