ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 11 ಅಧಿಕಾರಿಗಳು ಹಾಗೂ ಇಬ್ಬರು ನಿವೃತ್ತ ಇಂಜಿನಿಯರ್ ಗಳಿಗೆ ಸಂಬಂಧಿಸಿದಂತೆ ಒಟ್ಟಾರೇ 56 ಕಡೆಗಳಲ್ಲಿ ಇಂದು ಬೆಳಗ್ಗೆಯಿಂದ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಕಲಬುರಗಿ, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಸೇರಿದಂತೆ 9 ಜಿಲ್ಲೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಾಗಿ ಅವರ ಕಲಬುರ್ಗಿ ನಿವಾಸದ ಮನೆಯಲ್ಲಿ ದಾಳಿ ವೇಳೆ 12.50 ಲಕ್ಷ ರೂಪಾಯಿ ಮೌಲ್ಯದ ಕ್ಯಾಸಿನೊ ಕಾಯಿನ್ ಗಳು ಮತ್ತು ಕ್ಯಾಸಿನೊ ಸದಸ್ಯತ್ವದ ಕಾರ್ಡ್ ಕೂಡಾ ಸಿಕ್ಕಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ನಿನ್ನೆಯಿಂದ ಆರಂಭವಾದ ಇಡಿ ದಾಳಿ ಇಂದು ಕೂಡ ಮುಂದುವರಿಯಿತು. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ನಿವಾಸಗಳು ಸೇರಿ ಒಟ್ಟು ಹದಿನೆಂಟು ಕಡೆ ಶೋಧ ಕಾರ್ಯ ನಡೆಯಿತು. ಬಸವನಗೌಡ ದಡ್ಡಲ್ ಅವರ ಮಾಜಿ ಪಿಎ ಪಂಪಣ್ಣ ಮನೆ ಮೇಲೂ ಇಡಿ ದಾಳಿ ನಡೆದಿದೆ. ಗ್ರಾಮ ಪಂಚಾಯಿತಿಯೊಂದರ ಪಿಡಿಒ ಆಗಿ ನಿಯೋಜನೆಗೊಂಡಿದ್ದ ಪಂಪಣ್ಣ ಪಿಡಿಓ ಆಗಿ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾಲ್ಲೂಕ್ ಪಂಚಾಯಿತಿಯಲ್ಲಿ ಕೇಸ್ ವರ್ಕರ್ ಆಗಿ ಬಸವನಗೌಡ ದದ್ದಲ್ ಅವರ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ. ನೂತನ ಎಂಎಲ್ ಸಿ ಒಬ್ಬರ ಪಿಎ ಆಗಲು ಹೊರಟಿದ್ದ ಎನ್ನಲಾಗಿದೆ. ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಕಮಿಷನ್ ಪಡೆದಿರುವ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಆರೋಪಿಗಳು ಹನಿಟ್ರ್ಯಾಪ್ ಮೂಲಕ ಅಧಿಕಾರಿಗಳ ವಂಚಿಸಿದ್ದಾರೆ ಎಂದು ಬಿಜೆಪಿ ನಾಯಕ ಬಿ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಸೂಯೆಯಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ನಡೆದಿರುವ ವಿಚಾರವನ್ನು ಅಕ್ರಮ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುತ್ತೀನಾ? ಎಂದು ಪ್ರಶ್ನಿಸಿದರು. ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರವಾಗಿ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನನ್ನ ಪತ್ನಿಗೆ ಸೈಟ್ ಕೊಟ್ಟಿದ್ದು. ಅವರು ನನ್ನನ್ನು ಕೇಳಿ ಸೈಟ್ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಮಸಾಜ್ ಪಾರ್ಲರ್ ಹೆಸರಿನಲ್ಲಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ ಅವರನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ದಿವ್ಯಾ ವಸಂತ ಇಂದಿರಾನಗರದ ಮಸಾಜ್ ಪಾರ್ಲರ್ ನಲ್ಲಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈ ಪ್ರಕರಣ ಬಯಲಾಗುತ್ತಲೇ ಆಕೆ ತಲೆಮರೆಸಿಕೊಂಡಿದ್ದರು. ಮೊದಲು ತಮಿಳುನಾಡಿಗೆ ಪರಾರಿಯಾಗಿದ್ದ ದಿವ್ಯಾ ವಸಂತ ಅಲ್ಲಿಂದ ಕೇರಳಕ್ಕೆ ತೆರಳಿದ್ದರು ಎನ್ನಲಾಗಿದೆ.
ವೇಗವಾಗಿ ಬಂದ ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಮೂವರು ದುರ್ಮರಣ ಹೊಂದಿರುವ ಘಟನೆ ನಾಗಮಂಗಲ ಹಾಗೂ ಪಾಂಡವಪುರ ಹೆದ್ದಾರಿಯ ಶ್ರೀರಾಮನಹಳ್ಳಿ ಬಳಿ ನಡೆದಿದೆ. ಮೃತರನ್ನು ಚಿತ್ರದುರ್ಗ ಮೂಲದವರು ಎನ್ನಲಾಗಿದೆ. ಈ ಮೂವರು ಕಾರಿನಲ್ಲಿ ಬರುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯಿಂದ ದೂರಕ್ಕೆ ಸರಿದು ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಡೆಂಘಿ ಜ್ವರಕ್ಕೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಗುರುವಾರ ಹೇಳಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ 'ಡೆಂಘಿ ವಾರ್ ರೂಮ್' ಸ್ಥಾಪಿಸಬೇಕು, ಜಿಲ್ಲಾ ಮಟ್ಟದ ಕಾರ್ಯ ಪಡೆ ರಚಿಸಿ, ಹಾಟ್ ಸ್ಪಾಟ್ ಗುರುತಿಸಬೇಕು, ಫೀವರ್ ಕ್ಲಿನಿಕ್ ಆರಂಭಿಸಿ, ಸೊಳ್ಳೆ ನಿವಾರಕ ವಿತರಿಸುವಂತೆ ಇಲಾಖೆಯು ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬುಧವಾರ ಬಿಬಿಎಂಪಿಯಲ್ಲಿ 118 ಸೇರಿದಂತೆ 293 ಹೊಸ ಪ್ರಕರಣಗಳು ವರದಿಯಾಗಿತ್ತು.