ಬೆಂಗಳೂರು: ಉಳ್ಳಾಲ ಮುಖ್ಯರಸ್ತೆ-ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿ 28.2 ಕೋಟಿ ರೂ ವೆಚ್ಚದ ಗ್ರೇಡ್ ಸೆಪರೇಟರ್ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕಾಮಗಾರಿ ವಿಳಂಬಕ್ಕೆ ಬಿಬಿಎಂಪಿ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಕಿಡಿಕಾರಿದೆ.
ಎಎಪಿ ನಗರ ಘಟಕದ ಕಾರ್ಯದರ್ಶಿ ಅಂಜನ ಗೌಡ ಮಾತನಾಡಿ, ಕಾಮಗಾರಿ 2020ರಲ್ಲಿ ಆರಂಭವಾಗಿದ್ದು, 2022ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಗಡುವು ಮುಗಿದು ಸುಮಾರು ಎರಡು ವರ್ಷ ಕಳೆದರೂ ಪಾಲಿಕೆಯ ಯೋಜನಾ ವಿಭಾಗಕ್ಕೆ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸಂಚಾರ ದಟ್ಟಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರಯಾಣಿಕರು ಅಡ್ಡದಾರಿಗಳಿಂದ ಹೆಚ್ಚು ಕಾಲ ಪ್ರಯಾಣ ನಡೆಸುವಂತಾಗಿದೆ. ನಿರ್ಮಾಣ ಸಾಮಾಗ್ರಿಗಳಿಂಗ ಚಾಲಕರು, ಪಾದಚಾರಿಗಳಿಗೆ ಅಪಾಯ ಎದುರಾಗುತ್ತಿದೆ. ಗುತ್ತಿಗೆದಾರರಿಗೆ ಯೋಜನೆ ಪೂರ್ಣಗೊಳ್ಳುವ ಮುನ್ನವೇ 6.74 ಕೋಟಿ ರೂ. ಪಾವತಿಯಾಗಿದೆ, ಹಾಗಾದರೂ ಕಾಮಗಾರಿ ಏಕೆ ಪೂರ್ಣಗೊಂಡಿಲ್ಲ ಎಂದು ಪ್ರಶ್ನಿಸಿದರು.
ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿಎಸ್ ಪ್ರಹಲ್ಲಾದ್ ಮಾತನಾಡಿ, ಉಳ್ಳಾಲ ಮುಖ್ಯರಸ್ತೆ-ಕೆಂಗೇರಿ ಒಆರ್‌ಆರ್‌ನಲ್ಲಿನ ಯೋಜನೆಯು ಮಹತ್ವದ್ದಾಗಿದ್ದು, ಸಂಪೂರ್ಣ ರಸ್ತೆಯ ಸಂಚಾರ ಕಡಿತಗೊಳಿಸಿ ಕಾಮಗಾರಿ ನಡೆಸಲಾಗುವುದಿಲ್ಲ ಏಕೆಂದರೆ ಇದು ಅನಾನುಕೂಲತೆಗೆ ಕಾರಣವಾಗುತ್ತದೆ. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದಲ್ಲದೆ, ಗಣೇಶನ ದೇಗುಲ ಇದ್ದ ಕಾರಣ ಬೆಂಗಳೂರು ವಿಶ್ವವಿದ್ಯಾಲಯದಿಂದ ಆಕ್ಷೇಪ ವ್ಯಕ್ತವಾಗಿತ್ತು.
ಪಾಲಿಕೆಯೇ ಮಂದಿರ ನಿರ್ಮಾಣ ಮಾಡಬೇಕು ಎಂದು ವಿಶ್ವವಿದ್ಯಾಲಯ ಷರತ್ತು ವಿಧಿಸಿ ಭೂಮಿ ನೀಡಿದೆ. ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು. ಮಾರ್ಚ್ 2025 ರೊಳಗೆ ಪೂರ್ಣಗೊಳಿಸಲಾಗುವುದು. 6.74 ಕೋಟಿ ರೂ.ಗಳನ್ನು ನೀಡುವ ಒಪ್ಪಂದವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.