ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ 56 ವರ್ಷದ ಕುರಿಗಾಹಿ ಮತ್ತು ಅವರ ಪತ್ನಿ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ದೊಡ್ಡಬಳ್ಳಾಪುರ ಸಮೀಪದ ನಾಯಕರಂಡಹಳ್ಳಿ ನಿವಾಸಿಗಳಾದ ಪೀಕಾ ನಾಯಕ್ ಮತ್ತು ಅವರ ಪತ್ನಿ ಜಯ ಬಾಯಿ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 3.40ರ ಸುಮಾರಿಗೆ ವಡ್ಡರಹಳ್ಳಿ ಮತ್ತು ಮಾಕಳಿದುರ್ಗ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಅವರು ತಮ್ಮ ಹೊಲದಲ್ಲಿ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ರೈಲು ಬರುತ್ತಿರುವುದನ್ನು ಗಮನಿಸದ ಕುರಿಗಾಯಿ, ತನ್ನ ಕುರಿ ಮತ್ತು ಮೇಕೆಗಳೊಂದಿಗೆ ಹಳಿ ಮಧ್ಯದಲ್ಲಿ ಇದ್ದರು ಎನ್ನಲಾಗಿದೆ.
ಈ ವೇಳೆ ರೈಲು ಬರುತ್ತಿದ್ದುದನ್ನು ಕಂಡು ಕಂಡು ಪತ್ನಿಯು ಗಂಡನ ರಕ್ಷಣೆಗೆ ಧಾವಿಸಿದ್ದಳು. ವೇಗವಾಗಿ ಬಂದ ರೈಲು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.