ರಾಜ್ಯ

CM ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರಿಂದ ಅನುಮತಿ ಕೇಳಿ- HDK; ಮಾಜಿ ಸಚಿವ ನಾಗೇಂದ್ರ 5 ದಿನ ED ವಶಕ್ಕೆ; ಬೆಂಗಳೂರಿನಲ್ಲಿ 30 ಕೋಟಿ ಮೌಲ್ಯದ ಡ್ರಗ್ಸ್ ವಶ! ಇವು ಇಂದಿನ ಪ್ರಮುಖ ಸುದ್ದಿಗಳು 13-7-24

ಮಾಜಿ ಸಚಿವ ಬಿ ನಾಗೇಂದ್ರ 5 ದಿನ ಇಡಿ ವಶಕ್ಕೆ

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಳ್ಳಾರಿ ಶಾಸಕ ಬಿ ನಾಗೇಂದ್ರ ಅವರನ್ನು ವಿಶೇಷ ನ್ಯಾಯಾಲಯವು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ. ಪ್ರಕರಣ ಸಂಬಂಧ ನಿನ್ನೆ ನಾಗೇಂದ್ರರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ನಾಗೇಂದ್ರ ಅವರನ್ನು ಜುಲೈ 18ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದರು. ಇದೇ ಪ್ರಕರಣ ಸಂಬಂಧ ಎಸ್ಐಟಿ ಮುಂದೆ ನಾಗೇಂದ್ರ ವಿಚಾರಣೆಗೆ ಹಾಜರಾಗಿದ್ದರು. ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಬಸನಗೌಡ‌ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರಿಂದ ಅನುಮತಿ ಕೇಳಿ: ವಕೀಲರಿಗೆ HDK ಮನವಿ

ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ರಾಜ್ಯಪಾಲರ ಬಳಿ ಅನುಮತಿ ಕೇಳುವಂತೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ವಕೀಲರಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ರಾಜ್ಯದಲ್ಲಿನ ಹಗರಣಗಳ ವಿಷಯವನ್ನು ರಾಜ್ಯಪಾಲರ ಬಳಿ ಕೊಂಡೊಯ್ಯಲು ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೇಳುವಂತೆ ರಾಜ್ಯದ ಅಡ್ವೊಕೇಟ್ ಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಈ ವಿಷಯವಾಗಿ ಕೋರ್ಟ್ ಮೊರೆ ಹೋಗಿ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೊಂದೆಡೆ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಪರಿಗಣಿಸದಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್ ಮಂಜುನಾಥ್ ಪತ್ರ ಬರೆದಿದ್ದಾರೆ. ಈ ರೀತಿ ಹೆಸರು ಬದಲಾಯಿಸುವುದು ಸರಿಯಲ್ಲ. ಹೆಸರಿನೊಂದಿಗೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಮತ್ತು ಪೌರಾಣಿಕ ಸಂಪರ್ಕವಿದೆ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರು ಜಿಲ್ಲೆಯ ಹೆಸರನ್ನು ಕ್ಲೋಸ್ ಪೇಟೆಯಿಂದ ರಾಮನಗರ ಎಂದು ಬದಲಾಯಿಸಿದ್ದರು ಎಂದು ತಿಳಿಸಿದ್ದಾರೆ.

DDUTTL ಹಗರಣ: ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಬಂಧನ

ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಕ್ರಮ ಸಂಬಂಧ ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಗುತ್ತಿಗೆ ಅವ್ಯವಹಾರದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಡಿ.ಎಸ್‌. ವೀರಯ್ಯ, ಗುತ್ತಿಗೆದಾರರಿಂದ ಮೂರು ಕೋಟಿ ರೂಪಾಯಿ ಕಿಕ್‌ಬ್ಯಾಕ್‌ ಪಡೆದಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ. 2021ರಿಂದ 2023ರ ಅವಧಿಯಲ್ಲಿ DDUTTL ನಿಗಮದಲ್ಲಿ ಗುತ್ತಿಗೆ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಎಂದು ವಿಲ್ಸನ್ ಗಾರ್ಡನ್‌ ಠಾಣೆಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿಎನ್‌ ಶಿವಪ್ರಕಾಶ್ ದೂರು ನೀಡಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.

ಹಾವೇರಿ: ಅಪಘಾತದಲ್ಲಿ 4 ಯುವಕರು ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿರುವಂತಹ ಘಟನೆ ಹಾವೇರಿಯ ಶಿಗ್ಗಾಂವಿ ಬಳಿ ಇಂದು ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ನೀಲಪ್ಪ ಮೂಲಿಮನಿ, ಸುದೀಪ್ ಕೋಟಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಚಿಕಿತ್ಸೆ ಫಲಿಸದೆ ಶಿವನಗೌಡ ಯಲ್ಲನಗೌಡ, ಕಲ್ಮೇಶ ಮಾನೋಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಯುವಕರ ತಂಡ ಕಾರಿನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ನಂದಗಡಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬೆಂಗಳೂರಿನಲ್ಲಿ 30 ಕೋಟಿ ಮೌಲ್ಯದ ಡ್ರಗ್ಸ್ ವಶ

30 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಕೊಕೇನ್ ಹೊಂದಿದ್ದ ಕೀನ್ಯಾ ಪ್ರಜೆಯನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ದೋಹಾದಿಂದ ಬೆಂಗಳೂರಿಗೆ ಪ್ರಯಾಣಿಸಿದ ಕೀನ್ಯಾದ ಪ್ರಜೆಯನ್ನು ಡಿಆರ್‌ಐ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಆರೋಪಿ ಮಹಿಳೆ 3 ಕೆಜಿ ಕೊಕೇನ್ ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು ಕೂಡಲೇ ಆಕೆಯನ್ನು ವಶಕ್ಕೆ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ