ಬೆಂಗಳೂರು/ಚೆನ್ನೈ: ತಮಿಳುನಾಡಿಗೆ ಜುಲೈ 31ರವರೆಗೆ 20 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನಿರ್ದೇಶನವನ್ನು ಜಾರಿಗೊಳಿಸಲು ಕರ್ನಾಟಕ ನಿರಾಕರಿಸಿದ ನಂತರ ಕರ್ನಾಟಕ ಮತ್ತು ತಮಿಳುನಾಡು ನಡುವೆ ಹೊಸ ಸುತ್ತಿನ ವಿವಾದ ಭುಗಿಲೆದ್ದಿದೆ. ಸಿಡಬ್ಲ್ಯುಆರ್ ಸಿ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸುವ ನಿರ್ಧಾರ ಪ್ರಕಟಿಸಿದೆ.
ನಿನ್ನೆ ಶುಕ್ರವಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಮೇಲ್ಮನವಿ ಸಲ್ಲಿಸಲಿದೆ ಎಂದರು. ಕರ್ನಾಟಕದಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ನೀಡಲಾಗಿದ್ದರೂ, ಕಾವೇರಿ ನದಿ ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಅಣೆಕಟ್ಟುಗಳಿಗೆ ಒಳಹರಿವಿನಲ್ಲಿ ಶೇಕಡಾ 28ರಷ್ಟು ಕೊರತೆಯಿದೆ. ನಾಲ್ಕೂ ಜಲಾಶಯಗಳಲ್ಲಿ ಕೇವಲ 60 ಟಿಎಂಸಿ ಅಡಿ ನೀರಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾಳೆ ಸರ್ವಪಕ್ಷ ಸಭೆ: ನಾಳೆ ಜುಲೈ 14 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಸರ್ವಪಕ್ಷ ಸಭೆಯ ನಂತರ ಮಂಡ್ಯದ ರೈತರಿಗೆ ನೀರು ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಕಾನೂನು ತಂಡದೊಂದಿಗೆ ಚರ್ಚೆ ನಡೆಸಲಾಗಿದ್ದು, ಮುಂದಿನ ಹಾದಿಯಲ್ಲಿ ಕೆಲವು ಸಲಹೆಗಳನ್ನು ನೀಡಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡಿನ ವಿರೋಧ ಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕರ್ನಾಟಕದಿಂದ ಕಾವೇರಿ ನೀರು ಪಡೆಯುವಲ್ಲಿ ಡಿಎಂಕೆ ಸರ್ಕಾರ ಆಲಸ್ಯವಾಗಿದೆ ಎಂದು ಆರೋಪಿಸಿದೆ. ತಮಿಳುನಾಡು ಸರ್ಕಾರ, ಕರ್ನಾಟಕ ರಾಜ್ಯಕ್ಕೆ ನೀರು ಬಿಡುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದೆ.
ಸರ್ಕಾರವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಾವೇರಿ ನೀರು ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಮಿಳು ನಾಡಿನ ಹಿರಿಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದರು. ಆದಾಗ್ಯೂ, ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದರು. ಕರ್ನಾಟಕದಿಂದ ಬರಬೇಕಾದ ಭಾರೀ ಪ್ರಮಾಣದ ನೀರು, ತೀರದ ಜಿಲ್ಲೆಗಳಲ್ಲಿನ ಪರಿಸ್ಥಿತಿ ಮತ್ತು ಕರ್ನಾಟಕದ ಅಣೆಕಟ್ಟುಗಳಲ್ಲಿ ಪ್ರಸ್ತುತ ಸಂಗ್ರಹಣೆ ಸ್ಥಾನವನ್ನು ಮುಂದಿಟ್ಟುಕೊಂಡು ಸರ್ಕಾರವು ಮೊದಲು CWMA ಮುಂದೆ ತನ್ನ ವಾದವನ್ನು ಮಂಡಿಸುವ ಸಾಧ್ಯತೆಯಿದೆ.