ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೂ ಶಾಮೀಲಾಗಿದ್ದಾರೆ, ಆದರೆ, ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ತನ್ವೀರ್ ಸೇಠ್ ಅವರು ಶನಿವಾರ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ನಾನು ಪ್ರಾಧಿಕಾರದ ಸದಸ್ಯನಾಗಿದ್ದೇನೆ. ತನಿಖೆ ನಡೆಯುತ್ತಿರುವಾಗ ಆರೋಪದ ಬಗ್ಗೆ ನಾನು ಈಗ ಹೇಳಲು ಆಗಲ್ಲ. ನಿರಂತರ 15 ವರ್ಷದಿಂದ ಪ್ರಾಧಿಕಾರದ ಸದಸ್ಯನಾಗಿದ್ದೇನೆ. ಮುಡಾದಲ್ಲಿ ಅಧಿಕಾರಿಗಳು ಅಧಿಕಾರ ಮೀರಿ ಏನಾದರು ಮಾಡಿದ್ದರೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಪ್ರಾಧಿಕಾರ ಮಾಡಿದ ತೀರ್ಮಾನ ಕಾನೂನು ಬದ್ಧ ಆಗಿಲ್ಲ ಅಂದಾಗ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆಯಬೇಕು. ಮುಡಾ ಸಂಬಂಧ ಹಿಂದಿನ ಸರ್ಕಾರದಿಂದ ಈವರೆಗೆ ಸುಮಾರು 12 ಪತ್ರಗಳನ್ನು ಬರೆದಿದ್ದಾರೆ. ನಾನೂ ಅನೇಕ ಪತ್ರಗಳನ್ನು ಬರೆದಿದ್ದೇನೆ. ಮಂಡಳಿ ಸಭೆ ನಡೆಸದೇ ಇರುವುದು, ಅಭಿವೃದ್ಧಿ ಕೆಲಸ ವಿಳಂಬ ಬಗ್ಗೆ ನಾನು ಪತ್ರಗಳನ್ನು ಬರೆದಿದ್ದೇನೆ. ಮುಡಾ ಸಂಬಂಧ ತನಿಖಾ ಹಂತದಲ್ಲಿರುವಾಗ ನಾನು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.
ಪ್ರಾಧಿಕಾರದ ಸದಸ್ಯರಾಗಲು ಪರಿಷತ್, ವಿಧಾನಸಭೆ ಸದಸ್ಯತ್ವ ಇರಬೇಕು. ಇದನ್ನು ಸರ್ಕಾರ ಸರಿಪಡಿಸುವ ಕೆಲಸ ಮಾಡಬೇಕು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರ ಹೆಸರು ಕೇಳಿ ಬರುತ್ತಿದೆ. ಮುಡಾ ನಿವೇಶನ ಹಂಚಿಕೆ ವಿಚಾರವಾಗಿ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎಸ್.ಟಿ.ಸೋಮಶೇಖರ್ ಹೆಸರು ಕೇಳಿ ಬರುತ್ತಿದೆ. ಎಲ್ಲರ ಹೆಸರು ಕೇಳಿ ಬರುತ್ತಿದೆ. ಯಾರು ಇದ್ದಾರೆ, ಯಾರು ಇಲ್ಲ ಎಂಬ ಬಗ್ಗೆ ನಾನು ಹೇಳಲು ಆಗುವುದಿಲ್ಲ ಎಂದರು