ಬೆಂಗಳೂರು: ವಾಹನ ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗಳು ಮತ್ತು ಅಳಿಯ ತಾಯಿಗೆ ಕೀಟನಾಶ ಕುಡಿಸಿ ಹತ್ಯೆಗೆ ಯತ್ನಗೆ ಯತ್ನ ನಡೆಸಿರುವ ಘಟನೆಯೊಂದು ಕೆಂಗೇರಿ ಸಮೀಪದ ಅಂಚೆಪಾಳ್ಯದಲ್ಲಿ ನಡೆದಿದೆ.
ವಿ ಆಶಾ (37) ಅವರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಸುಶ್ಮಿತಾ ಹಾಗೂ ಆಕೆಯ ಪತಿ ಗಿರೀಶ್ ಎಂದು ಗುರ್ತಿಸಲಾಗಿದೆ.
ಗಿರೀಶ್ ನ್ಯಾಯಾಂಗ ಬಂಧನದಲ್ಲಿದ್ದು, ಸುಶ್ಮಿತಾ ಮೂರು ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿರುವುದರಿಂದ ಬಂಧನ ಪ್ರಕ್ರಿಯೆ ನಡೆದಿಲ್ಲ.
ದಂಪತಿಗಳಿಬ್ಬರೂ ಆಶಾ ಜೊತೆಯಲ್ಲೇ ಇದ್ದು, ಶುಕ್ರವಾರ ರಾತ್ರಿ ವಾಹನ ಖರೀದಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಜಗಳವಾಡಿದ್ದಾರೆ. ಮರುದಿನ ಬೆಳಿಗ್ಗೆ ಆಶಾ ಅವರಿಗೆ ಬಲವಂತವಾಗಿ ಕೀಟನಾಶಕ ಕುಡಿಸಿದ್ದಾರೆ. ಬಳಿಕ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬಳಿಕ ಆಶಾ ಅವರು ತನ್ನ ಸಹೋದರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ಬಂದ ಕುಟುಂಬಸ್ಥರು ಬಾಗಿಲು ಒಡೆದು ಆಶಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ, ಆಸ್ಪತ್ರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆ ಕೆ.ಆರ್.ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿದ್ದು, ಪ್ರತಿದಿನ ಮುಂಜಾನೆ 4.30ಕ್ಕೆ ಮನೆಯಿಂದ ಹೊರಡುತ್ತಿದ್ದರು. ಶನಿವಾರ ಕೆಲಸ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಗಿರೀಶ್ ಆಕೆಯ ಮೇಲೆ ಹಲ್ಲೆ ನಡೆಸಿರುವ ಆರೋಪವಿದೆ.
ಆರೋಪಿಗಳು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡು ವಿಷ ಕುಡಿಸಿದ್ದಾರೆಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎನ್‌ಎಸ್‌ನ ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ಕುಮಲಗೂಡು ಪೊಲೀಸರು ದಾಖಲಿಸಿಕೊಂಡಿದ್ದಾರೆ.