ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತರು ಶುಕ್ರವಾರ ರಾಜ್ಯದ ಐದು ಜಿಲ್ಲೆಗಳ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ 50 ಕೋಟಿ ರೂ. ಮೊತ್ತದ ಅಕ್ರಮ ಸಂಪತ್ತನ್ನು ಪತ್ತೆ ಮಾಡಿದ್ದಾರೆ.
ಕಾನೂನು ಮಾಪನಶಾಸ್ತ್ರದ ಉಪ ನಿಯಂತ್ರಕ ಅಥರ್ ಅಲಿ ದಾಳಿಗೊಳಗಾದವರಲ್ಲಿ ಅತಿ ಹೆಚ್ಚು 8.63 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ಇವರು 5.82 ಕೋಟಿ ರೂ. ಮೌಲ್ಯದ ನಾಲ್ಕು ಪ್ಲಾಟ್ ಗಳು, ಮೂರು ನಿವೇಶನಗಳು, 25.19 ಲಕ್ಷ ರೂ. ನಗದು, 2.08 ಕೋಟಿ ಮೊತ್ತದ ಚಿನ್ನಾಭರಣ, 11 ಲಕ್ಷ ರೂ. ಮೊತ್ತದ ವಾಹನಗಳು ಮತ್ತು 37.45 ಲಕ್ಷ ಮೊತ್ತದ ಗೃಹೋಪಯೋಗಿ ವಸ್ತು ಹೊಂದಿರುವುದು ತಿಳಿದುಬಂದಿದೆ.
ಮಂಗಳೂರು ನಗರ ಪಾಲಿಕೆ ಆಯುಕ್ತ ಸಿಎಲ್ ಆನಂದ್ ಅವರು ಮೂರು ಮನೆಗಳು, 4.7 ಎಕರೆ ಕೃಷಿ ಭೂಮಿ ಸೇರಿದಂತೆ 2.78 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇವರು ಹಿರಿಯ ದರ್ಜೆಯ ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಅಧಿಕಾರಿಯಾಗಿದ್ದು, ಜೂನ್, 2023 ರಲ್ಲಿ ಮಂಗಳೂರು ಸಿಟಿ ಕಾರ್ಪೊರೇಷನ್ ಕಮಿಷನರ್ ಆಗಿದ್ದರು. ಜುಲೈ 4 ರಂದು ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಹೀಗಾಗಿ ಜುಲೈ 9 ರಂದು ಅವರ ವರ್ಗಾವಣೆಯನ್ನು ರದ್ದುಗೊಳಿಸಲಾಗಿತ್ತು.
ಇನ್ವೆಸ್ಟ್ ಕರ್ನಾಟಕ ಫೋರಂನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಯೋಜನೆಗೊಂಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸಿ ಟಿ ಮುದ್ದುಕುಮಾರ್ ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದ್ದು,
ಅವರು ಮೂರು ಮನೆಗಳು, 6.20 ಎಕರೆ ಕೃಷಿ ಭೂಮಿ ಮತ್ತು ಫಾರ್ಮ್‌ಹೌಸ್ ಸೇರಿದಂತೆ 7.41 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಅಲ್ಲದೇ ಅವರ ಬಳಿ 88.76 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ನಗರ ಪಾಲಿಕೆ ಆಯುಕ್ತರು ಮತ್ತು ಕೆಎಎಸ್ ಅಧಿಕಾರಿ ಕೆ.ನರಸಿಂಹ ಮೂರ್ತಿ ಅವರ ಕಚೇರಿಯಲ್ಲಿ ಶೋಧ ನಡೆಸಲಾಗಿದೆ.
ಯಾದಗಿರಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಲವಂತ ರಾಠೋಡ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಪಶು ವೈದ್ಯಾಧಿಕಾರಿ ಆರ್.ಸಿದ್ದಪ್ಪ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬಿ.ಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್ ಹಾಗೂ ಮಂಡ್ಯ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ ಅವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರು, ತುಮಕೂರು, ಶಿವಮೊಗ್ಗ, ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ದಾಳಿ ನಡೆಸಲಾಗಿದೆ. 100 ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡ ತಂಡ ಇಂದು ಮುಂಜಾನೆಯಿಂದ 54 ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.