ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗುಡ್ಡ ಕುಸಿದು 10 ಮಂದಿ ಕಾಣೆಯಾಗಿದ್ದು, 7 ಮಂದಿಯ ಮೃತದೇಹ ಸಿಕ್ಕಿದೆ, ಇನ್ನೂ ಮೂವರು ಸಿಕ್ಕಿಲ್ಲ , ರಕ್ಷಣಾ ಕಾರ್ಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ವಿಳಂಬವಾಗಿಲ್ಲ, ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಸಲು ಸೂಚಿಸಿದ್ದೇನೆ. ಸದನ ನಡೆಯುತ್ತಿರುವುದರಿಂದ ತಕ್ಷಣ ಬರಲು ಆಗಿಲ್ಲ. ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಕಾರ್ಯಾಚರಣೆಗೆ ಭಾರಿ ಮಳೆ ಸವಾಲಾಗಿದೆ. ಎಂದು ತಿಳಿಸಿದ ಸಿಎಂ ಗುಡ್ಡ ಕುಸಿದ ಸ್ಥಳವನ್ನು ವೀಕ್ಷಿಸಿ ಅಧಿಕಾರಿಗಳು, ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದ ಸ್ಥಳಕ್ಕೆ ಸಚಿವ ಕೃಷ್ಣ ಬೈರೇಗೌಡ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ್ದು, ಕಾರ್ಯಾಚರಣೆ ಪರಿಶೀಲಿಸಿದರು.
ಇನ್ನು ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಪಶ್ಚಿಮ ಘಟ್ಟದಲ್ಲಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ಗುತ್ತಿಗೆ ಕಾಮಗಾರಿ ಮಾಡಲಾಗುತ್ತಿದೆ. ಕೇಂದ್ರದ ಭೂಸಾರಿಗೆ ಸಚಿವರಿಗೆ ಎಲ್ಲಾ ಮಾಹಿತಿ ಕೊಡುತ್ತೇನೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಲು ಗಡ್ಕರಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಅಬ್ದುಲ್ ಖಾದರ್ ವಿರುದ್ಧ FIR ದಾಖಲಿಸಲಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಈ ಘಟನೆ ನಡೆದಿತ್ತು. ಪ್ರಾಣಿ ದಯಾ ಸಂಘದ ಸದಸ್ಯೆ ಮಂಜುಳಾ ಕರ್ಕೇರ ಪೊಲೀಸರಿಗೆ ದೂರು ನೀಡಿದ್ದರು. ನಾಯಿಯನ್ನು ಸೇಂಟ್ ಮೇರಿಸ್ ಜಂಕ್ಷನ್‌ನಿಂದ ಮಂಚಕಲ್ ಪ್ರದೇಶದ ಕಡೆಗೆ 6 ಕಿ.ಮೀ ವರೆಗೆ ಎಳೆದೊಯ್ಯಲಾಗಿತ್ತು.
ಸಾರಿಗೆ ಇಲಾಖೆಯ ಚಾಲಕರು, ನಿರ್ವಾಹಕರು ಕರ್ತವ್ಯದ ವೇಳೆ ರೀಲ್ಸ್ ಮಾಡಿದರೆ ಅಂತವರನ್ನು ಮುಲಾಜಿಲ್ಲದೆ ಅಮಾನತುಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಕೆಎಸ್ಆರ್'ಟಿಸಿ ಬಸ್ ಚಾಲಕನೊಬ್ಬ ಬಸ್ ಒಳಗೆ ಕೊಡೆ ಹಿಡಿದುಕೊಂಡು ಬಸ್ ಚಲಾಯಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇನ್ನೊಂದು ಘಟನೆಯಲ್ಲಿ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ನಲ್ಲಿ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾಗಿದ್ದವು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೈತನ ಸ್ಥಿತಿ ಚಿಂತಾಜನಕವಾಗಿದೆ.
ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಿಂದ ಸೆಕ್ಯೂರಿಟಿ ಗಾರ್ಡ್ ಗೆ ವಂಚಿಸಿ ಅರ್ಥ್ ಮೂವರ್ ಕಳುವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರು ಕಟ್ಟಡ ಕಾರ್ಮಿಕರಾಗಿದ್ದಾರೆ. ಜುಲೈ 13 ರಂದು ಮುಂಜಾನೆ 1 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ಕಾಮಗಾರಿ ನಡೆಯುತ್ತಿರುವ ಬೇರೆ ಸ್ಥಳಕ್ಕೆ ಅರ್ಥ್ ಮೂವರ್ ಕೊಂಡೊಯ್ಯಬೇಕು ಎಂದು ಹೇಳಿ ಕಳುವು ಮಾಡಿದ್ದರು. ಮತ್ತೊಂದು ಪ್ರಕರಣದಲ್ಲಿ, ರಾಜ್ಯ ಅರಣ್ಯ ವಿಚಕ್ಷಣಾ ದಳದ ಪೊಲೀಸರು ಕೆಆರ್ ಪುರಂ ಐಟಿಐ ಕಾರ್ಖಾನೆಯ ಗೋದಾಮಿನ ಮೇಲೆ ದಾಳಿ ನಡೆಸಿದ್ದು, 2 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ವಿಕೆಂಡ್ ಬ್ಯೂಸಿಯಲ್ಲಿದ್ದ ಪಬ್ಗಳಿಗೆ ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ತಡರಾತ್ರಿವರೆಗು ಮದ್ಯದ ಪಾರ್ಟಿಗೆ ಅವಕಾಶ ಮಾಡಿಕೊಟ್ಟಿದ್ದ ಪಬ್ಗಳ ಮೇಲೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಟಿ.ಹೆಚ್ ನೇತೃತ್ವದ ತಂಡ ದಾಳಿ ಮಾಡಿದೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಡೆತನದ ಪಬ್ ಸೇರಿದಂತೆ 15 ಪಬ್ಗಳ ಮೇಲೆ ಈ ಹಿಂದೆ ಎಫ್ಐಆರ್ ದಾಖಲಾಗಿದೆ. ಈ ಎಲ್ಲ ಪಬ್ಗಳು ಸೇರಿದಂತೆ ಇದೀಗ ಹೊಸದಾಗಿ ಅವಧಿಗೂ ಮೀರಿ ತೆರದಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ನ ಪಬ್ಗಳ ಮೇಲೆ ಪೊಲೀಸರು ದಾಳಿ ಮಾಡಿ, ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು.