ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು 
ರಾಜ್ಯ

ಬೆಂಗಳೂರು: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ 'ಸರ್ಕಾರಿ ಮಾಂಟೆಸ್ಸರಿ' ತರಗತಿಗಳಿಗೆ ಚಾಲನೆ

'ಈಗ ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಮೊದಲ ಹಂತದಲ್ಲಿ 5 ಸಾವಿರ ಸರ್ಕಾರಿ ಮಾಂಟೆಸ್ಸರಿಗಳನ್ನು ತೆರೆಯಲು ನಮ್ಮ ಇಲಾಖೆ ಸನ್ನದ್ಧವಾಗಿದೆ'

ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಟ್ಟೆಗಾರಪಾಳ್ಯದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಹೊಸದಾಗಿ ಆರಂಭಿಸಿದ ಸರ್ಕಾರಿ ಮಾಂಟೆಸ್ಸರಿ - ಪೂರ್ವ ಪ್ರಾಥಮಿಕ ಕೇಂದ್ರ (ಎಲ್ ಕೆಜಿ, ಯುಕೆಜಿ ತರಗತಿಗಳಿಗೆ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಈಗ ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಮೊದಲ ಹಂತದಲ್ಲಿ 5 ಸಾವಿರ ಸರ್ಕಾರಿ ಮಾಂಟೆಸ್ಸರಿಗಳನ್ನು ತೆರೆಯಲು ನಮ್ಮ ಇಲಾಖೆ ಸನ್ನದ್ಧವಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣ, ಪೌಷ್ಠಿಕ ಆಹಾರ ಎಲ್ಲಾ ವರ್ಗದ ಮಕ್ಕಳಿಗೂ ದೊರೆಯಬೇಕೆಂಬ ಆಶಯದಿಂದ ರಾಜ್ಯ ಸರ್ಕಾರ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಿದೆ. ನಮ್ಮ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಮಕ್ಕಳ ಆರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಿದೆ. ನಮ್ಮ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಿ - ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲು ಸರ್ಕಾರ ಮುಂದಾಗಿದೆ ಎಂದರು.

ಅಂಗನವಾಡಿ ಹುಟ್ಟು ಹಾಕಿದ್ದೆ ಇಂದಿರಾ: ಈಗ್ಗೆ 49 ವರ್ಷಗಳ ಹಿಂದೆ ಅಂದರೆ 1975ರಲ್ಲಿ, ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರು ಕರ್ನಾಟಕದಲ್ಲಿ ಮೊದಲ ಬಾರಿಗೆ ಅಂಗನವಾಡಿಯನ್ನು ಆರಂಭಿಸಿದರು. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಮೊದಲ ಅಂಗನವಾಡಿ ಆರಂಭಗೊಂಡಿತು. ಆಗ ಆರಂಭಿಕವಾಗಿ 100 ಅಂಗನವಾಡಿ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ತೆರೆಯಲಾಯಿತು. ಈಗ ರಾಜ್ಯಾದ್ಯಂತ 70 ಸಾವಿರ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲೆ ಮೊಟ್ಟ ಮೊದಲು ಬಾರಿಗೆ ಅಂಗನವಾಡಿ ಆರಂಭವಾಗಿದ್ದೂ, ಕರ್ನಾಟಕದಲ್ಲಿ, ಪೂರ್ವ ಪ್ರಾಥಮಿಕ ಶಾಲೆ ಆರಂಭವಾಗುತ್ತಿರುವುದೂ ಕರ್ನಾಟಕದಲ್ಲೇ. ಇದು ನಮ್ಮ ರಾಜ್ಯದ ಹೆಗ್ಗಳಿಕೆ ಎಂದು ಹೇಳಿದರು.

ಕಾರ್ಯಕರ್ತೆಯರ ಒತ್ತಡಕ್ಕೆ ಮಣಿದು ಆರಂಭ: ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಿಕ್ಷಣ ಇಲಾಖೆಯಿಂದ ಆರಂಭಿಸುವ ಯೋಜನೆ ಇತ್ತು. ಆದರೆ, ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿದರು. ಶಿಕ್ಷಣ ಇಲಾಖೆ ಎಲ್ ಕೆಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿಯಿಂದ ಮಕ್ಕಳು ದೂರವಾಗುತ್ತಾರೆ. ಇದನ್ನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು. ಕಾರ್ಯಕರ್ತೆಯರ ಒತ್ತಡದ ಹಿನ್ನೆಲೆ ಅಂಗನವಾಡಿಯಲ್ಲೇ ಎಲ್ ಕೆಜಿ, ಯುಕೆಜಿ ಆರಂಭಿಸಲಾಗಿದೆ ಎಂದರು.

ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಪೌಷ್ಠಿಕ ಆಹಾರ: ಕಳೆದ 49 ವರ್ಷಗಳಿಂದ ಚಾಲ್ತಿಯಲ್ಲಿದ್ದ ನಮ್ಮ ಅಂಗನವಾಡಿ ಹೆಸರನ್ನೂ ಕೂಡ ಬದಲಾಯಿಸಿ, ಈಗ ಇವುಗಳಿಗೆ ‘ಸರ್ಕಾರೀ ಮಾಂಟೆಸ್ಸರಿ’ ಎಂದು ಹೆಸರು ಇಡಲಾಗಿದೆ. ಸಮಾಜದಲ್ಲಿ ಕೂಲಿ ಕೆಲಸ ಮಾಡುವವರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳಿಗೂ ನಮ್ಮ ಮಕ್ಕಳಿಗೆ ಒಳ್ಳೆಯ ಗುಣಾತ್ಮಕ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುತ್ತದೆ. ಆದರೆ, ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ, ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಮಾಂಟೆಸ್ಸರಿಗಳ ದುಬಾರಿ ಶುಲ್ಕಕ್ಕೆ ಕಡಿವಾಣ: ಇತ್ತೀಚೆಗೆ ಖಾಸಗಿ ಮಾಂಟೆಸ್ಸರಿಗೆ ವರ್ಷಕ್ಕೆ 80 ರಿಂದ 1 ಲಕ್ಷ ರೂಪಾಯಿವರೆಗೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಅಷ್ಟೊಂದು ದುಬಾರಿ ಹಣವನ್ನು ಕೊಟ್ಟು ಜನಸಾಮಾನ್ಯರು ತಮ್ಮ ಮಕ್ಕಳನ್ನು ಮಾಂಟೆಸ್ಸರಿಗಳಿಗೆ ಕಳುಹಿಸಲು ಸಾಧ್ಯವಿದೆಯೇ ಪ್ರಶ್ನಿಸಿದ ಸಚಿವರು, ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು, ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಠಿಕ ಆಹಾರ ಪ್ರತಿ ಮಗುವಿಗೂ ದೊರೆಯಬೇಕೆಂಬುದು ನಮ್ಮೆಲ್ಲರ ಆಶಯ. ಹಾಗಾಗಿ ಉಚಿತವಾಗಿ ಮಾಂಟೆಸ್ಸರಿ ತರಗತಿಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಮಾಂಟೆಸ್ಸರಿಗಳಲ್ಲೇ ಟಿಸಿ ನೀಡಿಕೆ: ಸರ್ಕಾರಿ ಮಾಂಟೇಸ್ಸರಿಗಳಲ್ಲಿ ಕನ್ನಡ, ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲೂ ಶಿಕ್ಷಣ ನೀಡಲಾಗುವುದು. ಮಕ್ಕಳಿಗೆ 1 ಜೊತೆ ಯೂನಿಫಾರಂ, 1 ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲಾಗುವುದು. ಮಕ್ಕಳ ಮುಂದಿನ ಶೈಕ್ಷಣಿಕ ಮುನ್ನಡೆಗೆ ಸಹಾಯವಾಗಲು ಇಲ್ಲೇ ಟಿಸಿ ಕೂಡ ನೀಡಲಾಗುವುದು. ಈ ಮಾಂಟೆಸ್ಸರಿಗಳಲ್ಲಿ PUC, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.

ಕಳಪೆ ಆಹಾರ ಪೂರೈಸಿದರೆ ನಿರ್ಧಾಕ್ಷಣ್ಯ ಕ್ರಮ: ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾದರೆ ಆಯಾಯ ಡಿಡಿ, ಸಿಡಿಪಿಓಗಳನ್ನು ಸಸ್ಪೆಂಡ್ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.

ಮಕ್ಕಳ ಭವಿಷ್ಯಕ್ಕೆ ನಮ್ಮ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ನಮ್ಮ ಇಲಾಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಕೃಷ್ಟವಾದ ಯೋಜನೆಗಳನ್ನು ಜನರಿಗೆ ನೀಡಲಿದೆ. ಇದಕ್ಕೆ ತಕ್ಕಂತೆ, ನೀವು ಕೂಡ ನಿಮ್ಮ ಕೌಶಲ್ಯ ಹೆಚ್ಚಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡಲು ಸನ್ನದ್ದರಾಗಬೇಕು. ಅಂಗನವಾಡಿಗೆ ಬರುವ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳಂತೆ ಬೆಳೆಸಬೇಕು ಎಂದು ಅಂಗನವಾಡಿ ಕಾರ್ಯಕರ್ತರಿಗೆ ಸಚಿವರು ಸಲಹೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT