ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಕೋಝಿಕ್ಕೋಡ್ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಗಂಗಾವಳಿ ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಇಂದು ಬೆಳಗ್ಗೆ ಬೂಮ್ ಲೆಂತ್ ಕ್ರೇನ್ ತರಿಸಿಕೊಂಡು ಶೋಧ ಕಾರ್ಯಾಚರಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ ಎಂದರು. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಸಹ ತೊಡಗಿಕೊಂಡಿದ್ದು ಭೂಗರ್ಭ ರಾಡಾರ್ ಯಂತ್ರವನ್ನು ಬಳಕೆ ಮಾಡುತ್ತಿದೆ. ಇದರಲ್ಲಿ ನದಿಯ ಒಳಗೆ ವಸ್ತು ಇರುವಿಕೆ ಪತ್ತೆಯಾಗಿದ್ದು ಇದು ಲಾರಿಯ ಅವಶೇಷವೇ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಈವರೆಗೂ 8 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.
ಮುಡಾ ಹಗರಣದ ಕುರಿತಂತೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಇಂದು ಸದನದಲ್ಲಿ ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ಕೊಡಿ ಎಂದು ಕೆಳಮನೆ ಮತ್ತು ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಆದರೆ ಬಿಜೆಪಿ ಬೇಡಿಕೆಯ್ನು ನಿರಾಕರಿಸಿದ ಸ್ಪೀಕರ್ ಯುಟಿ ಖಾದರ್, ಈ ವಿಷಯದಲ್ಲಿ ಚರ್ಚೆ ಮಾಡುವಂಥದ್ದು ಏನಿದೆ ಎಂದು ಪ್ರಶ್ನಿಸಿದರು. ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅಲ್ಲಿ ಹೋಗಿ ದಾಖಲೆ ಕೊಡಿ ಎಂದರು. ಇದಕ್ಕೆ ರೊಚ್ಚಿಗೆದ್ದ ವಿಪಕ್ಷಗಳು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಮಾತನಾಡಿರುವ ಅಶೋಕ್, ಮೂಡ ಹಗರಣದಲ್ಲಿ ಸರ್ಕಾರ ಹೆದರಿ ಓಡಿ ಹೋಗಿದೆ. 14 ಮೂಡ ನಿವೇಶನಗಳನ್ನು ನ್ಯಾಯಯುತವಾಗಿ ತೆಗೆದುಕೊಂಡಿರುವುದಾಗಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹೇಳಬೇಕು. ಸಿದ್ದರಾಮಯ್ಯ ಡಿಸಿಎಂ, ಸಿಎಂ ಆಗಿದ್ದಾಗ ಮೂಡ ಹಗರಣ ಆಗಿದೆ. ದಲಿತರ ಜಮೀನು ಲೂಟಿ ಹೊಡೆದು ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಲೇಡಿಸ್ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೋರಮಂಗಲದ ವಿಆರ್ ಲೇಔಟ್ ನ ಲೇಡಿಸ್ ಪಿಜಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮೃತರನ್ನು ಬಿಹಾರ ಮೂಲದ ಕೃತಿ ಕುಮಾರಿಯ ಎಂದು ಗುರುತಿಸಲಾಗಿದೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಶಿವಮೊಗ್ಗದಲ್ಲಿ ಮದುವೆಯಾಗು ಎಂದು ಒತ್ತಾಯಿಸುತ್ತಿದ್ದ ಪ್ರಿಯತಮೆಯನ್ನು ಪ್ರಿಯಕರನೇ ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ. ಮೃತ ಯುವತಿಯನ್ನು ಸೌಮ್ಯ ಎಂದು ಗುರುತಿಸಲಾಗಿದ್ದು ಸಾಗರ ಮೂಲದ ಸೃಜನ್ನನ್ನು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಸೌಮ್ಯ ಬಂದಿದ್ದಳು. ಆದರೆ ಮನೆಗೆ ಮಗಳು ಬಾರದ ಹಿನ್ನೆಲೆಯಲ್ಲಿ ಪೋಷಕರು ಕೊಪ್ಪ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ವೇಳೆ ಸೃಜನ್ ಸೌಮ್ಯಳನ್ನು ಹತ್ಯೆ ಮಾಡಿ ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣವನ್ನು ಇನ್ನು 10 ದಿನಗಳ ಒಳಗಾಗಿ ಖಾತೆಗೆ ಹಾಕಲಾಗುತ್ತದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಮೇ ತಿಂಗಳಲ್ಲಿ ಖಾತೆಗೆ ಹಣ ಹಾಕಿದ್ದೇವೆ. ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ 2 ತಿಂಗಳ ಹಣ ಬಾಕಿ ಉಳಿದಿದೆ. ಈಗಾಗಲೇ ಡಿಬಿಟಿ ತಾಂತ್ರಿಕ ಕಾರ್ಯಗಳು ನಡೆಯುತ್ತಿವೆ. ಇನ್ನು 8 ರಿಂದ 10 ದಿನಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು. ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂಬ ಊಹಾಪೋಹಗಳಿಗೂ ತೆರೆ ಎಳೆದಿರುವ ಸಚಿವರು, ಯಾವುದೇ ಕಾರಣಕ್ಕೂ ಯೋಜನೆ ಸ್ಧಗಿತ ಮಾಡುವುದಿಲ್ಲ ಎಂದರು.
ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದ ಓಬಳಸ್ವಾಮಿ ಎಂಬವರ ಪುತ್ರ 12 ವರ್ಷದ ರಾಮಚಂದ್ರ ಮೃತ ಬಾಲಕ. ಗ್ರಾಮದ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಜೀವ ಉಳಿಸಲು ಕಂಬ ಏರಿದ್ದ ಬಾಲಕ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ.