ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಮತ್ತು ಎಸ್‌ಟಿ ಕಾರ್ಪೊರೇಷನ್‌ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ 10 ದಿನಗಳ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಠಕ್ಕರ್ ಕೊಡಲು ಸಿದ್ದರಾಮಯ್ಯ ಬೆಂಬಲಿಗರು ಸಜ್ಜಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ತಮ್ಮ ಪಾದಯಾತ್ರೆಯ ನೀಲನಕ್ಷೆಯನ್ನು ರೂಪಿಸಲು ಇಂದು ಭಾನುವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
ಈ ಮಧ್ಯೆ, ಕುಮಾರಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರದಲ್ಲಿ ನಿನ್ನೆ ತಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್, ತಮ್ಮ ಪಕ್ಷವು ವಿಧಾನಸಭೆ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರದ "ದುಷ್ಕೃತ್ಯಗಳ" ವಿರುದ್ಧ ಹೋರಾಡುತ್ತಿದೆ. ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಇತರ ಯೋಜನೆಗಳಿಗೆ ಸರ್ಕಾರ ಬಳಸುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಜೆಡಿಎಸ್ ಹೋರಾಟ ಮುಂದುವರಿಸಲಿದೆ ಎಂದು ನಿಖಿಲ್ ಹೇಳಿದ್ದಾರೆ. ಪ್ರತಿಪಕ್ಷಗಳ ನಡೆಯನ್ನು ಎದುರಿಸಲು, ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಎಂದು ಪರಿಗಣಿಸಲಾದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಎನ್‌ಡಿಎ ಮೈತ್ರಿಕೂಟದ ಪಾದಯಾತ್ರೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜಣ್ಣ, ಮುಡಾದಲ್ಲಿ ನಡೆದಿರುವ ಹಗರಣದಂತಹ ಅವ್ಯವಹಾರವನ್ನು ಗಾಳಿಗೆ ತೂರಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ವರ್ಚಸ್ಸು ಹಾಳು ಮಾಡಲು ಸಂಚು ರೂಪಿಸಿವೆ ಎಂದು ಆರೋಪಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮಾತಿಗೆ ದನಿಗೂಡಿಸಿದರು.
ಹಿಂದುಳಿದ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರಿಯಲು ಬಿಡಬಾರದು ಎಂದು ನಡೆಸುವ ಪಿತೂರಿ ಇದಾಗಿದೆ. ಕೇಂದ್ರ ಸರ್ಕಾರವೂ ಅದರ ಭಾಗವಾಗಿದೆ. ಇದು ಅಹಿಂದಕ್ಕೆ ಮಾಡಿದ ಅವಮಾನ' ಎಂದು ರಾಜಣ್ಣ ಗುಡುಗಿದರು.
ಈ ನಡುವೆ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಬಿಜೆಪಿ ನಾಯಕರಿಂದ ಉತ್ತರ ನೀಡುವಂತೆ ಪೋಸ್ಟ್ ಕಾರ್ಡ್ ಮೂಲಕ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಆಡಳಿತದಲ್ಲಿ ನಡೆದಿರುವ ಹಗರಣಗಳನ್ನು ಬಯಲಿಗೆಳೆದು ಪಾದಯಾತ್ರೆಯಲ್ಲಿ ಬಿಜೆಪಿಯ ನಿಜಬಣ್ಣವನ್ನು ಬಯಲಿಗೆಳೆಯುತ್ತೇವೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶುಕ್ರವಾರ ಎಚ್ಚರಿಕೆ ನೀಡಿದ್ದರು.