ಬೆಂಗಳೂರು: ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ ಹಾಗೂ ದ್ಬಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ, ವಾಹನ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದಿದೆ. ಭಾನುವಾರ ರಾತ್ರಿ 8.45 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ಮೃತರನ್ನ ಪ್ರಶಾಂತ್ (25), ಬಯ್ಯಣ್ಣಗಿರಿ ಶಿಲ್ಪ ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಿವಾಸಿಯಾಗಿರುವ ಪ್ರಶಾಂತ್, ಶಿಲ್ಪಾ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಮೆಜೆಸ್ಟಿಕ್‌ನಿಂದ ಕೆ.ಆರ್ ಸರ್ಕಲ್ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ವೇಳೆ ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್ ವೃತ್ತದ ಮಾರ್ಗವಾಗಿ ಬಿಬಿಎಂಪಿ ಕಸದ ಲಾರಿ ವೇಗವಾಗಿ ಬರುತ್ತಿತ್ತು. ತಿರುವಿನ ಮಾರ್ಗದಲ್ಲೂ ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿಯೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಅಲ್ಲದೇ ಬೈಕ್‌ಗೆ ಡಿಕ್ಕಿ ಹೊಡೆದರೂ ಲಾರಿ ನಿಲ್ಲಿಸದೇ ಸುಮಾರು 10 ಮೀಟರ್‌ನಷ್ಟು ದೂರಕ್ಕೆ ಬೈಕ್ ಸವಾರರನ್ನ ಎಳೆದೊಯ್ದಿದೆ. ಅಪಘಾತದ ರಭಸಕ್ಕೆ ಕೆಳಗೆ ಬಿದ್ದ ಇವರ ಮೇಲೆ ಲಾರಿ ಹರಿದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಯುವಕ-ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಪಘಾತದ ವೇಳೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಾರ್ಥಾಸ್ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಗಿದ್ದು ಮೃತ ಪ್ರಶಾಂತ್ ಪೋಷಕರು ಕಣ್ಣೀರು ಹಾಕಿದ್ದಾರೆ. ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.