ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಭಾನುವಾರವೂ 320 ಮಂದಿಗೆ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ರಾಜ್ಯದ ಒಟ್ಟಾರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ 17 ಸಾವಿರ ಗಡಿ ದಾಟಿದೆ.
ನಿತ್ಯ ಸರಾಸರಿ 2,500 ಪರೀಕ್ಷೆ ನಡೆಸುತ್ತಿದ್ದ ಆರೋಗ್ಯ ಇಲಾಖೆಯು ಭಾನುವಾರ 1,630 ಮಂದಿಗೆ ಮಾತ್ರ ಪರೀಕ್ಷೆ ನಡೆಸಿದೆ. ಈ ಪೈಕಿ 320 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 17,227ಕ್ಕೆ ಏರಿಕೆಯಾಗಿದೆ.
ಭಾನುವಾರದ ಪ್ರಕರಣ ಸೇರಿ 3,004 ಮಂದಿ ಸಕ್ರಿಯ ಡೆಂಗ್ಯೂ ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ. ಈ ಪೈ 2,539 ಮಂದಿ ಮನೆಯಲ್ಲೇ ಚಿಕಿತ್ಸೆಯಲ್ಲಿದ್ದಾರೆ. 465 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ನಗರ ವ್ಯಾಪ್ತಿಯಲ್ಲಿ ಹಾಗೂ ಹೊರ ವಲಯದಲ್ಲಿ ರೋಗಗಳ ಹರಡುವಿಕೆಗೆ ಕಾರಣವಾದ ಸೊಳ್ಳೆ ಸಂತತಿಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ನಾಗರೀಕರು ದೂರಿದ್ದಾರೆ.
ಜೆಸಿ.ನಗರ ನಿವಾಸಿ ರಮೇಶ್ ಎಂಬುವವರು ಮಾತನಾಡಿ, ಮಳೆಯಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಪಾಲಿಕೆ ಅಧಿಕಾರಿಗಳು ಕಸದ ರಾಶಿ ತೆರವುಗೊಳಿಸುವುದು, ನೀರು ನಿಲ್ಲದಂತೆ ಮಾಡುವುದಾಗಲೀ, ಫಾಗಿಂಗ್ ಕಾರ್ಯಾಚರಣೆ ನಡೆಸುವುದಾಗಲೀ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಓಕಳಿಪುರಂ ಸುತ್ತಮುತ್ತ ಕಸದ ರಾಶಿಗಳು ರಾಶಿ ಬಿದ್ದಿದ್ದು, ಕಸ ತುಂಬಿದ್ದ ಟಿಪ್ಪರ್‌ಗಳು ಹೆಚ್ಚಾಗಿ ರಸ್ತೆ ಬದಿ ನಿಂತಿವೆ. ಇದರಿಂದ ಸೊಳ್ಳೆಗಳು ಹೆಚ್ಚಗಿದ್ದು, ಆತಂಕ ಸೃಷ್ಟಿಸುತ್ತಿದೆ ಓಕಳಿಪುರದ ನಿವಾಸಿಗಳು ಹೇಳಿದ್ದಾರೆ.
ತ್ಯಾಜ್ಯ ಸಂಗ್ರಹಣೆಯ ಟಿಪ್ಪರ್‌ಗಳು ಆಗಾಗ್ಗೆ ನಿಲ್ಲುತ್ತಿರುತ್ತವೆ. ಇದಷ್ಟೇ ಅಲ್ಲದೆ, ಖಾಲಿ ಜಾಗ ಸಿಕ್ಕಲ್ಲೆಲ್ಲಾ ಜನರು ತ್ಯಾಜ್ಯ ಸುರಿಯುತ್ತಿರುತ್ತಾರೆ. ಪಾಲಿಕೆ ಸಿಬ್ಬಂದಿ ಈ ಕಸ ಗಮನಿಸದಿದ್ದರೆ, ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ ಅಪಾಯಗಳೂ ಹೆಚ್ಚಾಗುತ್ತಿದೆ ಎಂದು ಡಿಜೆ ಹಳ್ಳಿಯ ಕೊಳಗೇರಿ ನಿವಾಸಿಗಳು ಹೇಳಿದ್ದಾರೆ.