ಮೈಸೂರು: ಕೇಂದ್ರ ಬಜೆಟ್‌ನಲ್ಲಿ ಅತಿ ಹೆಚ್ಚು ಅನ್ಯಾಯವಾಗಿದ್ದರೆ ಅದು ಕರ್ನಾಟಕ ರಾಜ್ಯಕ್ಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಕೆಆರ್ಎಸ್ಗೆ ಬಾಗಿನ ಅರ್ಪಿಸಲು ಮೈಸೂರಿಗೆ ಬಂದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾಮಾನ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಮಂಡ್ಯಕ್ಕೆ ಬಜೆಟ್‌ನಲ್ಲಿ ಏನು ಕೊಟ್ಟಿದ್ದಾರೆ? ಮಂಡ್ಯಕ್ಕೆ ಏನೂ ಕೊಟ್ಟಿಲ್ಲ. ಕೈಗಾರಿಕೆಯನ್ನಾದರೂ ಕೊಟ್ಟರಾ? ಇಲ್ಲ ಎಂದು ಹೇಳಿದರು.
ರಾಯಚೂರಿಗೆ ಏಮ್ಸ್ ಆಸ್ಪತ್ರೆ ಕೇಳಿದ್ದೆವು. ಅದನ್ನೂ ಕೊಟ್ಟಿಲ್ಲ. ಕೇವಲ ಆಂಧ್ರ ಪ್ರದೇಶ, ಬಿಹಾರಕ್ಕೆ ಮಾತ್ರ ಕೊಡುಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ತನ್ನ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಅವರ ಆರೋಪ ಕುರಿತು ಮಾತನಾಡಿ, ಪುಟ್ಟಯ್ಯ ಸಿಐಟಿಬಿ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟ್ ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ 40 ವರ್ಷದ ಹಿಂದೆ ಮುಡಾ ಸೈಟ್ ಪಡೆದಿದ್ದಾರೆ .ಅದರ ಸ್ವಾಧೀನ ಪತ್ರವನ್ನೂ ಪಡೆದುಕೊಂಡಿದ್ದಾರೆ. ಈಗ ಇಲ್ಲ ಎಂದು ಸುಳ್ಳು ಹೇಳಿದರೆ ಹೇಗೆ ? ನಾನು ಸ್ವಾಧೀನ ಪತ್ರ ಪಡೆದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಸುಳ್ಳು ಎಂದರು.
14 ಸೈಟ್ ವಾಪಸ್ ಕೊಟ್ಟು ತನಿಖೆ ಮಾಡಿಸಲಿ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿ ಮಾತನಾಡಿ, ಅವರು ಒಂದೇ ಒಂದು ತನಿಖೆಯನ್ನು ನ್ಯಾಯಾಂಗಕ್ಕೆ ಕೊಟ್ಟಿಲ್ಲ. ಬಿಜೆಪಿಯವರು ಸಾಕಷ್ಟು ಹಗರಣ ಮಾಡಿದ್ದಾರೆ .ಮುಡಾ ವಿಚಾರದಲ್ಲಿ ನನಗೆ ಬೇಜಾರಿಲ್ಲ. ಯಾಕೆಂದರೆ ನಾನು ತಪ್ಪು ಮಾಡಿಲ್ಲ. 40 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನನ್ನ ಹೆಸರಿಗೆ ಕಳಂಕ ತರುವ ಕೆಲಸ ಮಾಡ್ತಿದ್ದಾರೆ ಎಂದರು.
ಬಿಜೆಪಿ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿದೆ. ಇಲ್ಲದ ಹಗರಣವನ್ನು ಬಿಜೆಪಿ ಸೃಷ್ಟಿ ಮಾಡುತ್ತಿದೆ. ಅವರಿಗೆ ಯಾವ ಐಡಿಯಾಲಾಜಿಯೂ ಇಲ್ಲ. ಬಿಜೆಪಿ ಯಾವತ್ತೂ ನ್ಯಾಯದ ಪರವಾಗಿಲ್ಲ. ಮುಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ, ಅದನ್ನು ರಾಜಕೀಯವಾಗಿ ಹೆದರಿಸಲು ನಾವೂ ಸಿದ್ಧವಿದ್ದೇವೆ’ ಎಂದು ಹೇಳಿದರು.
ನ್ಯಾಯಾಂಗ ತನಿಖೆಯನ್ನು ಕೇಂದ್ರ ಸಚಿವರು ಅನುಮಾನದಿಂದ ನೋಡಿದರೇ ಅದರಲ್ಲಿ ಅರ್ಥ ಇದ್ಯಾ? ಇವರ ಅವಧಿಯಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಗೊತ್ತಾ? ಒಂದು ಪ್ರಕರಣವನ್ನಾದರೂ ನ್ಯಾಯಾಂಗ ತನಿಖೆ ಮಾಡಿಸಿದ್ದಾರಾ? ಕೋವಿಡ್ ಸಮಯದಲ್ಲಿ ನಾಲ್ಕು ಸಾವಿರ ಕೋಟಿ ನುಂಗಿದರೂ ಅದನ್ನು ತನಿಖೆ ಮಾಡಿದ್ರಾ? ನಾನು ಬಂದ ಮೇಲೆ ಏಳೆಂಟು ಹಗರಣ ಸಿಬಿಐಗೆ ಕೊಟ್ಟಿದ್ದೇನೆ. ಇವರ ಅವಧಿಯಲ್ಲಿ ಒಂದಾದ್ರು ಸಿಬಿಐಗೆ ಕೊಟ್ಟಿದ್ದಾರಾ? ಸಿಬಿಐ ಅನ್ನು ಚೋರ್ ಬಜಾವ್ ಸಂಸ್ಥೆ ಎನ್ನುತ್ತಿದ್ದ ಬಿಜೆಪಿ ಈಗ ಯಾಕೆ ಸಿಬಿಐ ಸಿಬಿಐ ಎಂದು ಬಾಯಿ ಬಡಿಯುತ್ತಿದೆ ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳ ಬಾಣಗಳನ್ನು ಎಸೆದರು.
ಇದೇ ವೇಳೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿಕಾರಿದ ಅವರು, ನೀತಿ ಆಯೋಗದ ಸಭೆಗೆ ಉದ್ದೇಶಪೂರ್ವಕವಾಗಿಯೇ ನಾನು ಹಾಜರಾಗಲಿಲ್ಲ. ಬಹಿಷ್ಕರಿಸಿದ್ದೇನೆ. ನಮ್ಮೊಂದಿಗೆ, ಬಿಜೆಪಿಯೇತರ ಸರ್ಕಾರಗಳೂ ಬಹಿಷ್ಕರಿಸಿವೆ. ರಾಜ್ಯಕ್ಕೆ ನ್ಯಾಯವೇ ಸಿಗದಿದ್ದ ಮೇಲೆ ಆ ಸಭೆಗೆ ಹೋಗಿ ಏನು ಪ್ರಯೋಜನ? ಎಂದು ಕೇಳಿದರು.
ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಇಲ್ಲಿಂದ ರಾಜ್ಯಸಭಾ ಸದಸ್ಯರಾಗಿರುವ ಅವರು, ಕರ್ನಾಟಕದ ಋಣ ತೀರಿಸಿಬಾರದಾ? ನಾವು ಮನವಿ ಸಲ್ಲಿಸಿ ಹಲವು ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದ್ದೆವು. ಅದ್ಯಾವುದಕ್ಕೂ ಅನುದಾನವನ್ನೇ ಕೊಟ್ಟಿಲ್ಲ. ಕರ್ನಾಟಕದ ಹೆಸರನ್ನೇ ಪ್ರಸ್ತಾಪಿಸಿಲ್ಲ. ಇದು ಅನ್ಯಾಯವಲ್ಲದೇ ಮತ್ತೇನು? ಎಂದು ಕೇಳಿದರು.
15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯ ದೇಶದ ಯಾವ ರಾಜ್ಯಕ್ಕೂ ಆಗಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ 2ನೇ ರಾಜ್ಯ ನಮ್ಮದು. ಆದರೂ ಅನ್ಯಾಯಾಗುತ್ತಿದೆ. ಆಂಧ್ರ, ಬಿಹಾರಕ್ಕೆ ಕೊಟ್ಟಿರುವುದೆಷ್ಟು, ನಮಗೆ ಕೊಟ್ಟಿರುವುದೆಷ್ಟು ಎಂಬುದನ್ನು ಸಚಿವರು ಹೇಳಲಿ’ ಎಂದು ಸವಾಲು ಹಾಕಿದರು. ಇಂತಹವರು ನಮಗೆ ಪಾಠ ಮಾಡಲು ಬರುತ್ತಾರೆಯೇ? ಎಂದು ಆಕ್ರೋಶದಿಂದ ಕೇಳಿದರು.
ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಸಂಪೂರ್ಣ ಹೋಗಿದೆ ಎಂದು ಹೇಳಲ್ಲ. ಆದರೆ, ಕಡಿಮೆಯಾಗಿದೆ ಎಂದು ಹೇಳಬಲ್ಲೆ. ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಎಷ್ಟಿತ್ತು ಎಂಬುದನ್ನು ಅದನ್ನು ಇಡೀ ದೇಶವೇ ನೋಡಿದೆ. ಈಗ ಕರ್ನಾಟಕವನ್ನು ಭ್ರಷ್ಟ ರಾಜ್ಯ ಎಂದು ಬಿಂಬಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಸಂಸತ್ ನಲ್ಲಿ ಕರ್ನಾಟಕಕ್ಕೆ ಭ್ರಷ್ಟಚಾರದ ಹಣೆ ಪಟ್ಟಿ ಕಟ್ಟು ಯತ್ನ ನಡೆಯುತ್ತಿದೆ. ಬಿಜೆಪಿಗೆ ಮಾನ ಮರ್ಯಾದೆ ಇದ್ಯಾ ಎಂದು ಮೂದಲಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಎನ್. ಚಲುವರಾಯಸ್ವಾಮಿ, ಶಾಸಕರಾದ ಕೆ.ಹರೀಶ್‌ಗೌಡ, ಡಿ. ರವಿಶಂಕರ್, ರವಿಕುಮಾರ್ ಗಣಿಗ, ಮುಡಾ ಅಧ್ಯಕ್ಷ ಕೆ.ಮರೀಗೌಡ ಪಾಲ್ಗೊಂಡಿದ್ದರು.