ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಕರಿಯಪ್ಪಹಳ್ಳಿ ಜಂಕ್ಷನ್ ಬಳಿ ವೇಗವಾಗಿ ಬಂದ ಕಾರು ಕರಿಯಪ್ಪಹಳ್ಳಿ ನಿವಾಸಿ ಹಾಗೂ ಟ್ರ್ಯಾಕ್ಟರ್ ಚಾಲಕ ನಲವತ್ತು ವರ್ಷದ ಕುಮಾರ್ ಎಂಬುವವರಿಗೆ ಡಿಕ್ಕಿ ಹೊಡೆದಿದೆ. ನೇಪಾಳ ಮೂಲದ ಕರಿಯಪ್ಪಹಳ್ಳಿ ನಿವಾಸಿಗಳಾದ ಕುಮಾರ್ ಮತ್ತು ಸವಿತಾ ಬಾಗ್ ಹಾಗೂ ಚಂಪಕಾ ಎಂಬ ಇಬ್ಬರು ಮಹಿಳೆಯರು ರಸ್ತೆ ದಾಟುತ್ತಿದ್ದಾಗ ಜಿಗಣಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ದಿನಗೂಲಿ ಕಾರ್ಮಿಕರಾಗಿದ್ದ ಮಹಿಳೆಯರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾರಿಹೋಕರು ಕಾರು ಚಾಲಕನನ್ನು ಹಿಡಿದಿದ್ದು, ಚಾಲಕನನ್ನು ಜಿಗಣಿ ನಿವಾಸಿ ಹರೀಶ್(26) ಎಂದು ಗುರುತಿಸಲಾಗಿದೆ. ಬನ್ನೇರುಘಟ್ಟ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಬೆಂಗಳೂರು-ಬಳ್ಳಾರಿ ರಸ್ತೆಯ ಚಿಕ್ಕಸಣ್ಣೆ ಗೇಟ್ ಬಳಿ ರಾತ್ರಿ 10.30ಕ್ಕೆ ಹಾಲಿನ ಟ್ಯಾಂಕರ್ ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಿಕ್ಕಬಳ್ಳಾಪುರದ ಬಕ್ ಸವಾರ ಅಮರನಾಥ ರೆಡ್ಡಿ(45) ಮೃತಪಟ್ಟಿದ್ದಾರೆ. ಆತನ ಹಿಂದೆ ಕುಳಿತಿದ್ದ ದೇವನಹಳ್ಳಿ ನಿವಾಸಿ ನಾಗೇಶ್ ಎಂಬುವವರಿಗೆ ಗಾಯಗಳಾಗಿವೆ.
ಹಾಲಿನ ಟ್ಯಾಂಕರ್ ಏಕಾಏಕಿ ಬಲ ತಿರುವು ಪಡೆದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾರಿಹೋಕರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ರೆಡ್ಡಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಾಗೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವನಹಳ್ಳಿ ಸಂಚಾರ ಪೊಲೀಸರು ಲಾರಿ ಚಾಲಕ ಸುರೇಶ್‌ನನ್ನು ಬಂಧಿಸಿದ್ದಾರೆ.