ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಟಬು ರಾವ್ ಬುಧವಾರ ನಗರದ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.
ದಿನೇಶ್ ಗುಂಡೂರಾವ್ ಅಂತರ್ ಧರ್ಮೀಯ ವಿವಾಹವಾಗಿರುವುದನ್ನು ಉಲ್ಲೇಖಿಸಿ, ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು. ಬಳಿಕ ಟಬು ರಾವ್ ಇದೇ ವರ್ಷದ ಏಪ್ರಿಲ್ 6 ರಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಬುಧವಾರ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಎನ್. ಶಿವಕುಮಾರ್ ಮುಂದೆ ಹಾಜರಾದ ಟಬುರಾವ್, ಹೇಳಿಕೆಯನ್ನು ದಾಖಲಿಸಿದರು. ಆಗಸ್ಟ್ 7 ಮತ್ತು 8 ರಂದು ಈ ವಿಷಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ಪಟ್ಟಿ ಮಾಡಿದೆ.