ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಸಾವಿರಾರು ಜನರನ್ನು ಅವರ ಗ್ರಾಮಗಳಿಂದ ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಿಸಿದೆ.
ರಾಜ್ಯ ಸರ್ಕಾರ, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ಮತ್ತು ನಿಪ್ಪಾಣಿ ತಾಲೂಕಿನ ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ತರಾತುರಿಯಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಪರಿಹಾರ ಕೇಂದ್ರಗಳಲ್ಲಿರುವ ಚಿಂಚಲಿ ಮತ್ತು ಅಥಣಿ ತಾಲೂಕಿನ ಹಲವು ಜನ, ಕೇಂದ್ರಗಳಲ್ಲಿ ಸಮರ್ಪಕ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಆದರೆ ಅಧಿಕಾರಿಗಳು, ಅನೇಕ ನಿರಾಶ್ರಿತರಿಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ನೀಡುವುದರ ಜೊತೆಗೆ ಸಂಜೆ ತಿಂಡಿ ಮತ್ತು ಚಹಾವನ್ನು ನೀಡುತ್ತಿದ್ದೇವೆ. ಕೇಂದ್ರದಲ್ಲಿ ಪ್ರತಿಯೊಬ್ಬರಿಗೂ ಬೆಡ್‌ಶೀಟ್‌ಗಳು, ಹೊದಿಕೆಗಳು, ಅಡುಗೆ ಪಾತ್ರೆಗಳು ಮತ್ತು ನೀರಿನ ಮಡಕೆಗಳನ್ನು ಸಹ ನೀಡಲಾಗುತ್ತಿದೆ.
ರಾಜ್ಯದ ವಿವಿಧ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವ ಪ್ರತಿ ಜಾನುವಾರುಗಳಿಗೆ 14 ಕೆಜಿ ಮೇವು ನೀಡಲಾಗುತ್ತಿದೆ ಮತ್ತು ಪರಿಹಾರ ಕೇಂದ್ರಗಳಲ್ಲಿರುವವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮೇಕ್-ಶಿಫ್ಟ್ ವೈದ್ಯಕೀಯ ಆರೈಕೆ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.