ಲೋಕಸಭಾ ಚುನಾವಣಾ ಬೆನ್ನಲ್ಲೆ ಇದೀಗ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಏಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಳೆದ ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸಂಖ್ಯಾಬಲದ ಮೇಲೆ ಒಟ್ಟು 11ರಲ್ಲಿ ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಹೈಕಮಾಂಡ್ ಅಳೆದು ತೂಗಿ 7 ಜನರಿಗೆ ಮಣೆ ಹಾಕಿದ್ದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಹಾಲಿ ಸಚಿವ ಎನ್.ಎಸ್.ಬೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ ಗೋವಿಂದರಾಜು, ವಸಂತಕುಮಾರ್, ಜಗದೇವ್ ಗುತ್ತೇದಾರ್, ಐವನ್ ಡಿಸೋಜಾ ಮತ್ತು ಬಿಲ್ಕಿಸ್ ಬಾನೊ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇನ್ನು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರನ್ನ ಆಯ್ಕೆ ಮಾಡಿದೆ. ಇದಕ್ಕೂ ಮುನ್ನ ಬಿಜೆಪಿ ಸಹ ತನ್ನ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಬಿಜೆಪಿಯಿಂದ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮೂಳೆ ಅವರು ಸ್ಫರ್ಧಾ ಕಣದಲ್ಲಿದ್ದಾರೆ.
ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವ ಉದ್ಯಮಿಯೊಬ್ಬ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ ಉದ್ಯಮಿ ಶ್ರೇಯಸ್ ನಾಯ್ಕ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು ಆರೋಪಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು ಮೇ 18ರಂದು ಪೋಕ್ಸೊ ಪ್ರಕರಣ ದಾಖಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಶ್ರೇಯಸ್ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.
ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿಯಲ್ಲಿ ಪಲ್ಲಕ್ಕಿ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ವೀರಸಂದ್ರ ನಿವಾಸಿ ರಂಗನಾಥ, ಯಾರಂಡಹಳ್ಳಿ ನಿವಾಸಿ ಹರಿಬಾಬು ಮೃತ ದುರ್ದೈವಿಗಳು. ಪಲ್ಲಕ್ಕಿ ಉತ್ಸವ ಮುಗಿಸಿ ವಾಪಸ್ ಬರುವಾಗ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿತ್ತು. ಆಗ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಚಾಲಕನಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಚಾಲಕನನ್ನು ರಕ್ಷಣೆ ಮಾಡಲು ಹೋಗಿ ಮತ್ತೊಬ್ಬನಿಗೂ ವಿದ್ಯುತ್ ಪ್ರವಹಿಸಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಸಿಲ್ವರ್ ಮರಕ್ಕೆ ಮರಗಸಿ ಮಾಡುವಾಗ ಕಾರ್ಮಿಕರೊಬ್ಬರು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ. ಮೃತನನ್ನು 45 ವರ್ಷದ ಚಂದ್ರಪ್ಪ ಎಂದು ಗುರುತಿಸಲಾಗಿದೆ.
ಚಿಕ್ಕಬಳ್ಳಾಪುರದ ದಂಡಿಗಾನಹಳ್ಳಿ ಡ್ಯಾಂನಲ್ಲಿ ಈಜಲು ತೆರಳಿದ್ದ ಮುಂಬೈ ಮೂಲದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಲಿಯಾ ಪಾಟೇಲ್ ಹಾಗೂ ಜೋಯಾ ಪಾಟೇಲ್ ಮೃತ ಬಾಲಕಿಯಾಗಿದ್ದಾರೆ. ಗೌರಿಬಿದನೂರಿನ ಸಂಬಂಧಿಕರ ಮನೆಗೆ ಬಾಲಕಿಯರು ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಸ ವಿಂಗಡಣೆ ಗುತ್ತಿಗೆದಾರನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆ ಶಾಹೀನ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪಶ್ಚಿಮ ಬಂಗಾಳದ ನೊಯ್ಡಾ ಜಿಲ್ಲೆಯ ನಿವಾಸಿಯಾದ ಶಹೀನ್ ಹಾಗೂ ಆತನ ಪತ್ನಿ ಮೀಮ್ ರನ್ನು ಬಂಧಿಸಲಾಗಿದೆ. ಶಾಹೀನ್ ಶೇಖ್ ಮೀಮ್ ಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.