ತುಮಕೂರು: ಸತತ ಚುನಾವಣಾ ಸೋಲುಗಳಿಂದ ಸೋತು ಕಂಗೆಟ್ಟಿದ್ದ ವಿ ಸೋಮಣ್ಣ ಕೊನೆಗೂ ಹಾಲಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
ಗೋವಿಂದರಾಜನಗರದಿಂದ ಮೈಸೂರು ಚಾಮರಾಜನಗರ ಜಿಲ್ಲೆಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ವಲಸೆ ಹೋಗಿ ಸೋತಿದ್ದ ಮಾಜಿ ಸಚಿವ ವಿ.ಸೋಮಣ್ಣ (V somanna) ತುಮಕೂರಲ್ಲಿ ಭಾರೀ ಅಂತರದಿಂದ ಗೆದ್ದಿದ್ದಾರೆ. ತುಮಕೂರಿನಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡಗೆ ಸೋಲಾಗಿದ್ದು, ಇಲ್ಲಿ ಕಾಂಗ್ರೆಸ್ ಮುಖಭಂಗಕ್ಕೀಡಾಗಿದೆ. ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮುದ್ದ ಹನುಮೇಗೌಡ ಪಕ್ಷಕ್ಕೆ ಮರಳಿದ ಎರಡೇ ತಿಂಗಳಲ್ಲಿ ಸೋಲು ಅನುಭವಿಸಿದ್ದಾರೆ.
ತುಮಕೂರು ಜನತೆಗೆ ಧನ್ಯವಾದ ಹೇಳಿದ ಸೋಮಣ್ಣ
ಇನ್ನು ಫಲಿತಾಂಶ ಪ್ರಕಟ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ವಿ ಸೋಮಣ್ಣ ತುಮಕೂರಿನ ಜನತಗೆ ಧನ್ಯವಾದ ಹೇಳಿದ್ದಾರೆ. ''ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲ್ಲಿಸುತ್ತೇನೆ. ಎರಡು ಬಾರಿ ಸೋತ ನನಗೆ ಅಮಿತ್ ಶಾ ಮತ್ತೆ ಅವಕಾಶ ಕೊಟ್ಟರು. ಅವಕಾಶ ಕೊಟ್ಟಿರುವುದಕ್ಕಾಗಿ ಅಮಿತ್ ಶಾಗೆ ಧನ್ಯವಾದ ಹೇಳುತ್ತೇನೆ ಎಂದರು.
ಇದೇ ವೇಳೆ ಯಡಿಯೂರಪ್ಪಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಹೊರಗಿನ ಅಭ್ಯರ್ಥಿ ಎಂದು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದೇ ಭಾವಿಸಿ ಹೆಚ್ಚಿಗೆ ದುಡಿದೆ. ಪರಿಣಾಮವಾಗಿ ಗೆಲುವು ಸಾಧಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಧುಸ್ವಾಮಿ ವಿರುದ್ಧ ಕಿಡಿ
ಇದೇ ವೇಳೆ ಮಾಧುಸ್ವಾಮಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೋಮಣ್ಣ, ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದೆ. ಆದರೆ ಅವರ ನಡವಳಿಕೆ, ನೀಚ ಬುದ್ದಿಯನ್ನು ಬಿಟ್ಟು ಸರಿಹೋಗಲಿ ಎಂದು ಹೇಳಿದರು. ಜಿ.ಪರಮೇಶ್ವರ್ ಹಾಗೂ ಕೆ ಎನ್ ರಾಜಣ್ಣ ನಾವು ಹಳೇ ಸ್ನೇಹಿತರು. ಅವರ್ಯಾರು ನಮ್ಮ ವಿರುದ್ಧ ಹೆಚ್ಚಿಗೆ ಮಾತಾಡಿಲ್ಲ. ಕ್ಷೇತ್ರದ ಅಭಿವೃದ್ದಿಗೆ ನಾವೆಲ್ಲಾ ಈಗ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.