ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೊನ್ನೆ ಮಂಗಳವಾರ ತಡರಾತ್ರಿ NEET-2024 ಫಲಿತಾಂಶವನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಚ್ಚರಿಗೊಳಿಸಿತು. ಜೂನ್ ಎರಡನೇ ವಾರದಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿತ್ತು.
ಒಟ್ಟು 67 ಅಭ್ಯರ್ಥಿಗಳು ದೇಶದಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ, ಅವರಲ್ಲಿ ಮೂವರು ಕರ್ನಾಟಕದವರು - ಕಲ್ಯಾಣ್ ವಿ, ಸ್ಯಾಮ್ ಶ್ರೇಯಸ್ ಜೋಸೆಫ್ ಮತ್ತು ಅರ್ಜುನ್ ಕಿಶೋರ್ - ಅವರು ಶೇಕಡಾ 99.999 ಗಳಿಸಿರುವುದು ಹೆಮ್ಮೆಯ ವಿಷಯ.
ರಾಜ್ಯದಿಂದ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ 89,088 NEET 2024 ಗೆ ಅರ್ಹತೆ ಪಡೆದಿದ್ದಾರೆ. ಕಳೆದ ವರ್ಷ ಕೂಡ ಇದೇ ಮಾದರಿಯಲ್ಲಿ ಕರ್ನಾಟಕ ಸಾಧನೆಯಿತ್ತು. ಪರೀಕ್ಷೆಗೆ ಹಾಜರಾಗಿದ್ದ 1.3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ 75,248 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ಎನ್‌ಟಿಎ ಬಿಡುಗಡೆ ಮಾಡಿದ ಟಾಪ್-100 ರ‍್ಯಾಂಕ್ ಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಆರು ಸೀಟುಗಳನ್ನು ಪಡೆದುಕೊಂಡಿದ್ದು, ಅವರಲ್ಲಿ ಐವರು ಬಾಲಕರು ಮತ್ತು ಓರ್ವ ಬಾಲಕಿ ಇದ್ದಾರೆ.
ಬೆಂಗಳೂರಿನ ಕಲ್ಯಾಣ್ ಅವರು ಬಿ ಫಾರ್ಮ್, ಫಾರ್ಮ್ ಡಿ, ಪಶುವೈದ್ಯಕೀಯ ವಿಜ್ಞಾನ ಮತ್ತು ನರ್ಸಿಂಗ್ ಸ್ಟ್ರೀಮ್‌ಗಳಲ್ಲಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CET) ಅಗ್ರಸ್ಥಾನ ಗಳಿಸಿದ್ದರು, ಸಿಇಟಿ ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ಶನಿವಾರ ಪ್ರಕಟಿಸಿತ್ತು. ಈ ಬಗ್ಗೆ TNIE ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, “ನಾನು ಮೊದಲ ರ‍್ಯಾಂಕ್ ಗಳಿಸುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಕಾರ್ಯಕ್ಷಮತೆಯ ಬಗ್ಗೆ ನನಗೆ ವಿಶ್ವಾಸವಿತ್ತು. ಭೌತಶಾಸ್ತ್ರಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳಲ್ಲಿ ನನಗೆ ಗೊಂದಲವಿತ್ತು, ವೇಳಾಪಟ್ಟಿ ಮಾಡಿಕೊಂಡು ಸಿಲೆಬಸ್ ಓದುತ್ತಿದ್ದೆ. ಸಂಶೋಧಕನಾಗಲು ನನಗೆ ಆಸಕ್ತಿಯಿದ್ದು ದೆಹಲಿಯ ಏಮ್ಸ್ ಸೇರಬೇಕೆಂದು ಬಯಸುತ್ತಿದ್ದೇನೆ ಎಂದರು.
ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಅರ್ಜುನ್ ಸಹ ಮೊದಲ ರ‍್ಯಾಂಕ್ ಗಳಿಸಿದ್ದು, NEETPG ಗೆ ಅರ್ಹತೆ ಪಡೆದ ಸರ್ಜರಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕೆಂದು ಬಯಸುತ್ತಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜಿನ ಫಾರ್ಮಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಕಿಶೋರ್ ಅವರ ಪುತ್ರ ಹಾಗೂ ತಾಯಿ ಸ್ತ್ರೀರೋಗ ತಜ್ಞೆ ರಶ್ಮಿ ಅವರು ಮಗನ ಸಾಧನೆಗೆ ಖುಷಿಪಟ್ಟಿದ್ದಾರೆ.
ನಾನು ತರಗತಿಗಳ ಹೊರತಾಗಿ ದಿನಕ್ಕೆ ಆರು ಗಂಟೆಗಳ ಕಾಲ ಕಷ್ಟಪಟ್ಟು ಓದುತ್ತಿದ್ದೆ. ರ‍್ಯಾಂಕ್ ಬಂದಾಗ ಸಂಬಂಧಿಕರು, ಪರಿಚಿತರು ಕರೆ ಮಾಡಿ ಅಭಿನಂದಿಸಿದರು. ಬಹಳ ಖುಷಿಯಾಯಿತು. ನನ್ನ ತಂದೆ ತಾಯಿಯ ಉದ್ಯೋಗದ ಮಾದರಿ ಮೆಡಿಸನ್ ನಲ್ಲಿ ಮುಂದುವರಿಯಬೇಕೆಂದಿದ್ದೇನೆ ಎಂದರು.
ಸಾಮಾನ್ಯ ವರ್ಗದ ಅಭ್ಯರ್ಥಿಗಳ ಕಟ್-ಆಫ್ ಮಾರ್ಕ್ಸ್ ಕಳೆದ ವರ್ಷದ 720-137 ರಿಂದ 720-164 ಕ್ಕೆ ಏರಿಕೆಯಾಗಿದೆ. ರಾಜ್ಯವಾರು ಸಾಧನೆಗೆ ಸಂಬಂಧಿಸಿದಂತೆ, ಉತ್ತರ ಪ್ರದೇಶವು 1,65,047 ವಿದ್ಯಾರ್ಥಿಗಳೊಂದಿಗೆ ಅತಿ ಹೆಚ್ಚು ಅರ್ಹ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡು ಕ್ರಮವಾಗಿ 1,42,665, 1,21,240 ಮತ್ತು 89,426. ಕರ್ನಾಟಕ ಐದನೇ ರ್ಯಾಂಕ್ ಪಡೆದುಕೊಂಡಿದೆ. ಭಾರತದಾದ್ಯಂತ, 13,16,268 ವಿದ್ಯಾರ್ಥಿಗಳು UGNEET 2024 ಗೆ ಅರ್ಹತೆ ಪಡೆದಿದ್ದಾರೆ. ಪರೀಕ್ಷೆಯು ಮೇ 5 ರಂದು ದೇಶಾದ್ಯಂತ ನಡೆಯಿತು.